ಮೈಸೂರು

ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ

ಮೈಸೂರಿನ ಕಲಾಮಂದಿರದಲ್ಲಿ ಮಂಗಳವಾರ ವಿಕಲಚೇತನರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ರಾಜ್ಯ ಸಚಿವ ಕೃಷ್ಣನ್ ಪಾಲ್ ಗುರ್ಜಾರ್ ಸಾಧನ ಸಲಕರಣೆಗಳನ್ನು ವಿತರಿಸಿದರು.

ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಅಲಿಂಕೋ ಬೆಂಗಳೂರು, ಮೈಸೂರು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಹಯೋಗದಲ್ಲಿ ಅ.25 ರಂದು ಕಲಾಮಂದಿರದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ (ADIP) ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ರಾಜ್ಯ ಸಚಿವರಾದ ಕೃಷನ್ ಪಾಲ್ ಗುರ್ಜಾರ್ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿಯವರ ಅಭಿಲಾಷೆಯಂತೆ ಸಮಾಜದಲ್ಲಿನ ವಿಶೇಷ ಚೇತನರೆಲ್ಲರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮುಖ್ಯ ಉದ್ದೇಶದಿಂದ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದೇವೆ. ದಿವ್ಯಾಂಗ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಲು ಮೊಬೈಲ್, ಟ್ಯಾಬ್ಲಾಯ್ಡ್, ಟಿವಿ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೇ ಹೊಸ ತಂತ್ರಜ್ಞಾನವುಳ್ಳ ಉಪಕರಣಗಳನ್ನು ಜರ್ಮನಿ, ಇಂಗ್ಲೆಂಡ್ ಗಳಿಂದ ತರಿಸಲಾಗುತ್ತಿದೆ. ವಿಶೇಷ ಚೇತನರು ಆರ್ಥಿಕ, ಕ್ರೀಡೆ, ಶೈಕ್ಷಣಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮಾತನಾಡಿ, “ವಿಕಲಚೇತನರನ್ನು ಪ್ರೀತಿ ವಿಶ್ವಾಸದಿಂದ ನೋಡುವ ಬದಲು ಹೀನ ದೃಷ್ಟಿಯಿಂದ ನೋಡುತ್ತಿದ್ದಾರೆ. ಅಂತಹ ದುಸ್ಥಿತಿ ಬದಲಾಗಿ ಅವರನ್ನು ಪ್ರೀತಿಯಿಂದ ಭಾವಿಸಬೇಕು. ಅವರಿಗೆ ಆತ್ಮಸ್ಥೈರ್ಯ ನೀಡುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದೆ. ಎಲ್ಲರಂತೆ ಅವರನ್ನೂ ಸಮಾನ ದೃಷ್ಟಿಯಲ್ಲಿ ಕಂಡರೆ ಅವರು ಸಹ ಗೌರವಯುತವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಅಲ್ಲದೇ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ” ಎಂದು ತಮ್ಮ ವೈಯಕ್ತಿಕ ಬದುಕನ್ನು ಉದಾಹರಣೆ ನೀಡಿ ಹುರಿದುಂಬಿಸಿದರು.

ಸುಮಾರು 182ವ್ಹೀಲ್ ಚೇರ್ ಗಳು, 206 ಕೈಚಾಲಿತ ಸಾದಾ ತ್ರಿಚಕ್ರವಾಹನ, 196 ಊರುಗೋಲು, 43 ನಡಿಗೆಕೋಲು, ದೃಷ್ಟಿಹೀನರಿಗೆ 49ವೈಟ್ ಕೇನ್, 67 ಬ್ರೈಲ್ ಕಿಟ್ಸ್, 864 ಕಿವಿಯ ಸಾಧನಗಳನ್ನು ವಿತರಿಸಲಾಯಿತು.

ಚಾಮರಾಜ ಕ್ಷೇತ್ರದ ವಿಧಾನಸಭಾ ಸದಸ್ಯ ವಾಸು, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಗೋವಿಂದರಾಜು, ಪಾಲಿಕೆ ಉಪಮಹಾಪೌರರಾದ ವನಿತ ಪ್ರಸನ್ನ, ಜಿಲ್ಲಾ ಪಂಚಾಯತ್ ಅಧ‍್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮ್ಮದ್, ಜಿಲ್ಲಾಧಿಕಾರಿ ಡಿ.ರಂದೀಪ್ ಉಪಸ್ಥಿತರಿದ್ದರು.

 

 

Leave a Reply

comments

Related Articles

error: