ಕರ್ನಾಟಕ

ಆರೋಪಿಗಳ ಬಂಧನಕ್ಕೆ 3 ದಿನಗಳ ಗಡುವು : ಬಿಜೆಪಿಯಿಂದ ಅಹೋರಾತ್ರಿ ಧರಣಿಯ ಎಚ್ಚರಿಕೆ

ಮಡಿಕೇರಿ ಆ.31 : ಕಕ್ಕಬ್ಬೆಯ ಶ್ರೀ ಭಗವತಿ ದೇವಾಲಯದ ಸ್ವಾಗತ ಕಮಾನಿನಲ್ಲಿ ಗೋವಿನ ಕಾಲುಗಳನ್ನು ನೇತು ಹಾಕಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಬಿಜೆಪಿ, ಸೆಪ್ಟೆಂಬರ್ 3ರ ಒಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ಎಲ್ಲಾ ಧರ್ಮದವರೊಂದಿಗೆ ಶಾಂತಿ ಸಹಬಾಳ್ವೆಯಿಂದ ನಡೆದುಕೊಳ್ಳುತ್ತಿರುವ ಹಿಂದೂಗಳನ್ನು ಕೆಣಕುವ ಷಡ್ಯಂತ್ರ ಜಿಲ್ಲೆಯಲ್ಲಿ ನಡೆಯುತ್ತಿದೆ  ಎಂದು ಆರೋಪಿಸಿದರು. ದೇವಾಲಯದಲ್ಲಿ ಗೋವಿನ ಕಾಲುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಮೂರು ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡಿದರೆ ಅದಕ್ಕೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರವೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿನಲ್ಲಿ ಸೆ.3ರ ನಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪಕ್ಷದ ವತಿಯಿಂದ ಆರಂಭಿಸಲಾಗುವುದೆಂದರು. ಹಿಂದೂಗಳನ್ನು ಕೆಣಕುವುದಕ್ಕಾಗಿಯೇ ಗೋವಿನ ಕಾಲುಗಳನ್ನು ದೇವಾಲಯದ ಆವರಣದಲ್ಲಿ ಇಡಲಾಗಿದೆ. ರಾಜ್ಯ ಸರ್ಕಾರ ಒಂದು ಜನಾಂಗವನ್ನು ತುಷ್ಟೀಕರಣಗೊಳಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಕೊಡಗು ಜಿಲ್ಲೆಯಲ್ಲಿ ಗೋವುಗಳ ಹತ್ಯೆಗೆ ಅವಕಾಶವಿಲ್ಲ. ಆದರೂ, ಗೋವುಗಳ ಕಳ್ಳತನ, ಹತ್ಯೆ ನಡೆಯುತ್ತಿದ್ದು, ಇದೀಗ ದೇವಾಲಯದ ಬಳಿ ಗೋವಿನ ಕಾಲುಗಳನ್ನು ಇಡುವ ಮೂಲಕ ಉದ್ದೇಶಪೂರ್ವಕವಾಗಿ ಕೆಣಕಲಾಗುತ್ತಿದೆ. ಈ ಪ್ರಕರಣದ ಹಿಂದೆ ಕೆಎಫ್‍ಡಿ ಮತ್ತು ಪಿಎಫ್‍ಐ ಷಡ್ಯಂತ್ರವಿದೆ ಎಂದು ಆರೋಪಿಸಿದರು.

ದೇಶದ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು. ಆದರೆ, ಹಿಂದೂಗಳ ಆಚಾರ, ವಿಚಾರಗಳಿಗೆ ಮಾತ್ರ ಕಾನೂನನ್ನು ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಟ ನಡೆಸಲೇಬೇಕಾಗಿದೆ. ಸರ್ಕಾರ ಹಿಂದೂಗಳನ್ನು ಸದೆ ಬಡಿಯುವ ಚಿಂತನೆ ಮಾಡಿದಲ್ಲಿ ಜನರೆ ತಿರುಗೇಟು ನೀಡಲಿದ್ದಾರೆ ಎಂದು ತಿಳಿಸಿದ ರವಿ ಕುಶಾಲಪ್ಪ, ಪಿಎಫ್‍ಐ ಮತ್ತು ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಗೋವುಗಳ ಹತ್ಯೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಆದರೆ, ಸರ್ಕಾರದ ಒತ್ತಡ ಇರುವುದರಿಂದ ಪೊಲೀಸರಲ್ಲಿ ಗೊಂದಲದ ವಾತಾವರಣವಿದೆ. ದಕ್ಷ ಅಧಿಕಾರಿಗಳನ್ನು ಶಿಕ್ಷಿಸುತ್ತಿರುವ ಸರ್ಕಾರ ಗೋ ಹತ್ಯೆಯಂತಹ ಹೀನ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.

ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ, ಆಯಾ ಪ್ರದೇಶದಲ್ಲಿ ವಾಸಿಸುವವರು ಅಲ್ಲಿನ ಸಂಸ್ಕೃತಿ ಮತ್ತು ಭಾವನೆಯನ್ನು ಗೌರವಿಸಬೇಕು. ಆದರೆ, ಕೊಡಗಿನಲ್ಲಿ ಗೋ ಹತ್ಯೆಗೆ ಅವಕಾಶವಿಲ್ಲವೆಂದು ತಿಳಿದಿದ್ದರು ಹಿಂದೂಗಳ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಂಗಳೂರು ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲು ಅಶಾಂತಿ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಅಮಾಯಕರನ್ನು ಬಂಧಿಸಬಾರದೆಂದು ರವಿ ಕಾಳಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷರಾದ ಎಸ್.ಸಿ.ಸತೀಶ್, ತಾಪಂ ಸದಸ್ಯರಾದ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಪಕ್ಷದ ಸಮಾಜಿಕ ಜಾಲ ತಾಣ ಮೋರ್ಚಾದ ಅಧ್ಯಕ್ಷ ಕಾಳಚಂಡ ಅಪ್ಪಣ್ಣ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)
 

Leave a Reply

comments

Related Articles

error: