ಮೈಸೂರು

ಎಲ್.ಎನ್.ಶಾಸ್ತ್ರಿ ಅವರನ್ನು ಸ್ಮರಿಸಿದ ಜಿಲ್ಲಾ ಬ್ರಾಹ್ಮಣ ಸಂಘ

ಮೈಸೂರು,ಸೆ.1-ಹಿನ್ನೆಲೆಗಾಯಕ ಹಾಗೂ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರ ಮರಣ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಆಡಂಬರವಿಲ್ಲದೆ ಶಾಸ್ತ್ರಿರವರ ಸರಳ ಜೀವನ ಇಂದಿನ ಯುವಪೀಳಿಗೆಯ ಕಲಾವಿದರಿಗೆ ಮಾದರಿಯಾಗಬೇಕು ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಎಲ್.ಎನ್.ಶಾಸ್ತ್ರಿ ಸಂತಾಪ ಸಭೆ ಆಯೋಜಿಸಲಾಗಿತ್ತು. ಎಲ್.ಎನ್.ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಶಾಸ್ತ್ರಿ ಮೂರು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ತಮ್ಮ ಅದ್ಭುತ ಕಂಠದ ಮೂಲಕ ಜೀವ ತುಂಬಿದ್ದಾರೆ. ಹಂಸಲೇಖ, ವಿ.ಮನೋಹರ್, ಹರಿಕೃಷ್ಣ, ರಾಜೇಶ್ ರಾಮನಾಥ್ ರವರ ಸಂಗೀತ ನಿರ್ದೇಶನದಲ್ಲಿ ಶಾಸ್ತ್ರಿ ರವರ ಗಾಯನ ಕನ್ನಡಿಗರ ಗಮನಸೆಳೆದಿದೆ. ಸಹಸ್ರಾರು ಯುವ ಕಲಾವಿದರನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರಲು ಅವರ ಪಾತ್ರ ಮಹತ್ವವಾಗಿದೆ. ಪ್ರಖ್ಯಾತ ಸಂಗೀತ ಸಂಜೆ ಪ್ರದರ್ಶನಗಳಲ್ಲಿ ಹಾಡುವ ಮೂಲಕ ಕಲಾಪ್ರೋತ್ಸಾಹಕರಿಗೆ ಹತ್ತಿರವಾಗಿದ್ದರು ಎಂದು ಅವರನ್ನು ಸ್ಮರಿಸಿದರು.

ಬಿಜೆಪಿ ಮುಖಂಡರಾದ ಕೆ.ಆರ್.ಮೋಹನ್ ಕುಮಾರ್ ಮಾತನಾಡಿ, ಸಂಗೀತವೆಂದರೆ ಸಂಸ್ಕಾರದ ಜೊತೆ ಶ್ರಮದ ಸಾರ್ಥಕತೆವಿರಬೇಕು. ಇದಕ್ಕೆ ಸಾಕ್ಷಿಯೆಂದರೆ ಲಕ್ಷ್ಮಿನರಸಿಂಹ ಶಾಸ್ತ್ರಿ,  ಕನ್ನಡ ಚಿತ್ರರಂಗದ ಅಜಗಜಾಂತರ ಚಿತ್ರದಲ್ಲಿ ಹಾಡುವ ಮೂಲಕ ವೃತ್ತಿಯನ್ನು ಪ್ರಾರಂಭಿಸಿ ತಮ್ಮ ಉಸಿರುವರೆಗೂ ಹಾಡಿದರು. ಇಹಲೋಕ ತ್ಯಜಿಸಿದ್ದರೂ ಅವರ ಶ್ರಮದ ಸಾರ್ಥಕತೆ ಕಲಾವಿದರಿಗೆ ಸ್ಪೂರ್ತಿಯಾಗಿದೆ. ಹಳ್ಳಿಜೀವನ ಬಿಂಬಿಸುವ ಜನುಮಜೋಡಿ ಚಿತ್ರದ ಕೋಲುಮಂಡೆ ಜಂಗಮದೇವ ಜಾನಪದ ಶೈಲಿಯ ಹಾಡಿನ ಮೂಲಕ ಚಿತ್ರರಂಗದಲ್ಲಿ ಜನಮನ್ನಣೆಗಳಿಸಿ ಹೊಸ ಆಯಾಮಕ್ಕೆ ಕಾರಣವಾಗಿದ್ದರು. ಇವರ ಹಿನ್ನಲೆ ಗಾಯನದ ಅತ್ಯುತ್ತಮ ಸಾಧನೆಗಾಗಿ 1996ರಲ್ಲಿ ಕರ್ನಾಟಕ ರಾಜ್ಯ ಚಲಚಿತ್ರ ಪ್ರಶಸ್ತಿ ಲಭಿಸಿತು. ಮುಂದಿನ ದಿನದಲ್ಲಿ ಎಲ್.ಎನ್.ಶಾಸ್ತ್ರಿ ರವರ ಜೀವಮಾನ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಮತ್ತು ರಾಜ್ಯಸರ್ಕಾರ ಯೋಜನೆಗಳನ್ನು ರೂಪಿಸಬೇಕು ಎಂದರು.

ನಗರದಲ್ಲಿ ಯಾವುದಾದರೂ ರಸ್ತೆಗೆ ಎಲ್.ಎನ್.ಶಾಸ್ತ್ರಿ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಜಿಲ್ಲಾ ಬ್ರಾಹ್ಮಣ ಸಂಘದವರು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥ ಸಾರಥಿ, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಹಿರಿಯ ಕಲಾವಿದ ಮೈಕ್ ಚಂದ್ರು, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ  ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ಶ್ರೀಕಾಂತ್ ಕಶ್ಯಪ್, ವಿನಯ್ ಕಣಗಾಲ್, ರಂಗನಾಥ್, ರಾಜಗೋಪಾಲ್, ನಿಶಾಂತ್, ಶ್ರೀನಿಧಿ ವಸಿಷ್ಟ, ಬಾಲಕೃಷ್ಣ, ಸುಧೀಂದ್ರ, ಸುರೇಶ್, ಪುಟ್ಟಸ್ವಾಮಿ, ರಘು, ವಾಸುದೇವಮೂರ್ತಿ, ಶ್ರೀನಾಥ್, ಬ್ರಹ್ಮಣ್ಯತೀರ್ಥ, ಫಣೀಶ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: