ಮೈಸೂರು

ಅವಸಾನದತ್ತ ಸಾಗುತ್ತಿದೆ ವೀರನಗೆರೆ ಕೋಟೆ : ರಕ್ಷಣೆಗೆ ಕ್ರಮ ಕೈಗೊಳ್ಳಲು ಸ್ಥಳೀಯರ ಒತ್ತಾಯ

ಮೈಸೂರು,ಸೆ.1:- ಬೆಂಗಳೂರಿನಿಂದ  ಮೈಸೂರಿಗೆ ಬರುವಾಗ ಫೌಂಟನ್ ಸರ್ಕಲ್ ನೇರ ಅಶೋಕರಸ್ತೆಯ ಮೂಲಕ ನಗರದೊಳಗೆ ಸಾಗಿದರೆ ಎಡಗಡೆ ಎರಡು ಗೋಪುರಗಳು ಕಾಣಲಿದ್ದು  ಅದರತ್ತ ನಡೆದರೆ ಇತಿಹಾಸದ ಗತವೈಭವನ್ನು ನೆನಪಿಸುವ, ಇಂದಿಗೂ ಗ್ರಾಮಪರಂಪರೆಯನ್ನು ಅಲ್ಲಲ್ಲಿ ಉಳಿಸಿಕೊಂಡಿರುವ ಊರೊಂದು ಸಿಗುಲಿದೆ ಅದರ ಹೆಸರೇ ವೀರನಗೆರೆ.

ಈ ಊರಿನ ಸುತ್ತ ಇರುವ ಪಳೆಯುಳಿಕೆಯೇ ವೀರನಗೆರೆಯ ಕೋಟೆಯಾಗಿದೆ. ನಗರದ ಅಶೋಕ ರಸ್ತೆಯ ಕೊನೆಯಲ್ಲಿ ನರಸಿಂಹರಾಜ ಪ್ರಾಥಮಿಕ ಪಾಠ ಶಾಲೆ ಹಾಗೂ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡಗಳ ಬಳಿ ತನ್ನ ಅವಶೇಷಗಳೊಂದಿಗೆ ಗತ ದಿನಗಳನ್ನು ಭಾರವಾದ ಹೃದಯದೊಂದಿಗೆ ನೆನಪಿಸಿಕೊಳ್ಳುತ್ತ ನಿಂತಂತೆ  ಕಾಣಸಿಗಲಿದೆ. ಮೈಸೂರು ನಗರಕ್ಕೆ ಗಡಿ ಗುರುತಿಸದೆ ಹೋದರೆ ಮತ್ತೆ ಅಪಾಯಕ್ಕೆ ಆಹ್ವಾನ ನೀಡುವುದು ಖಚಿತ ಎಂಬುದನ್ನು ಅಂದಿನ  ಒಡೆಯರು ಅರಿತಿದ್ದು,  ಗಡಿ ತಂಟೆಯನ್ನೇ ನೆಪ ಮಾಡಿಕೊಂಡು ಮೈಸೂರು ರಾಜರೊಂದಿಗೆ ಯುದ್ಧಕ್ಕೆ ಬಂದಿದ್ದ ಕೆಸರೆಯ ಪಾಳೇಗಾರ ವೀರನಾಯಕ ಹೆಸರಿನಲ್ಲೇ ಈ ಕೋಟೆಯನ್ನು ನಿರ್ಮಾಣ ಮಾಡಲಾಯಿತು ಎನ್ನುತ್ತದೆ ಇತಿಹಾಸ

ಈಗಲೂ ಕೂಡ ವಿಜಯ ದಶಮಿಯ ದಿನ ಸೀಮೋಲ್ಲಂಘನೆ ಮಾಡುವುದೆಂದರೆ ವೀರನಗೆರೆ ಕೋಟೆಯ ಗಡಿಯಿಂದ ಆಚೆಗೆ ಹೋಗುವುದು ಎಂದೇ ಅರ್ಥ. ಇದೇ ಅರ್ಥದಲ್ಲಿ ಇಂದಿಗೂ ವಿಜಯದಶಮಿಯ ದಿನದಂದು ಜಂಬೂ ಸವಾರಿಯ ಸಮೇತ ನಗರದ ಹೊರ ವಲಯದಲ್ಲಿರುವ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಇಂತಹ ಅಪರೂಪದ ಐತಿಹಾಸಿಕ ಘಟನಾವಳಿಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಇಂತಹದೊಂದು ಕೋಟೆ ಇದೀಗ ಅವಸಾನದ ಅಂಚಿನಲ್ಲಿದೆ. ಜಿಲ್ಲಾಡಳಿತವಾಗಲೀ, ಸ್ಮಾರಕಗಳನ್ನು ರಕ್ಷಿಸುವ ಹೊಣೆ ಹೊತ್ತಿರುವ ಪ್ರಾಚ್ಯವಸ್ತು ಇಲಾಖೆಯಾಗಲೀ ಅಥವಾ ಪಾರಂಪರಿಕ ಘಟಕದ ಅಧಿಕಾರಿಗಳಾಗಲೀ ಈ ಕೋಟೆಯ ರಕ್ಷಣೆ ಮಾಡದಿರುವುದು ವಿಷಾದನೀಯ. ಇನ್ನಾದರೂ ಎಚ್ಚೆತ್ತು ಸಂಬಂಧಿಸಿದ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದೇ ಸ್ಥಳೀಯರ ಒತ್ತಾಯವಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: