ಮೈಸೂರು

ಪೊಲೀಸ್ ಇಲಾಖೆ ಆಡಳಿತದಲ್ಲಿ ಪಾರದರ್ಶಕತೆಗೆ ಮಾನ್ಯತೆ : ನೂತನ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್

ನಗರದ ನೂತನ ಪೊಲೀಸ್ ಆಯುಕ್ತರಾಗಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ನಜರ್‍ಬಾದ್‍ನಲ್ಲಿರುವ ಕಮಿಷನರ್ ಕಚೇರಿಗೆ ತೆರಳಿದ ಅವರು, ಸಾಮಾನ್ಯ ನಿಯಮಾವಳಿಗಳನ್ನು ಪೂರೈಸಿ ಐಜಿಪಿ ಬಿಕೆ ಸಿಂಗ್ ಅವರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದಲ್ಲದೆ ಶಾಂತ ನಗರಿ ಎಂದೂ ಖ್ಯಾತಿಗಳಿಸಿದೆ. ಇಂತಹ ನಗರಕ್ಕೆ ಪೊಲೀಸ್ ಆಯುಕ್ತರಾಗಿ ಆಯ್ಕೆಯಾಗಿರುವುದು ಖುಷಿ ನೀಡಿರುವುದಲ್ಲದೇ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಕಾರ ನನ್ನ ಮೇಲೆ ಭರವಸೆಯಿಟ್ಟು ನೀಡಿರುವ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನ್ನಲ್ಲಿದೆ ಎಂದು ಹೇಳಿದರು.

ನನಗೆ ಸಿಬಿಐನಲ್ಲಿ ಐದು ವರ್ಷ ಕೆಲಸ ಮಾಡಿದ ಅನುಭವ ಇದ್ದು ಪೊಲೀಸ್ ಇಲಾಖೆಗೆ ಅಗತ್ಯವಾಗಿ ಬೇಕಾಗಿರುವ ಕೆಲ ಅಂಶಗಳನ್ನು ಅಳವಡಿಸಿಕೊಂಡಿದ್ದೇನೆ. ಪೊಲೀಸರೆಂದರೆ ಸಾರ್ವಜನಿಕರಲ್ಲಿ ಭಯದ ಭಾವನೆ ಇದ್ದು, ಇದನ್ನು ಹೋಗಲಾಡಿಸಲು ಪಬ್ಲಿಕ್ ಫ್ರೆಂಡ್ಲಿ ಪೊಲೀಸ್ ಸೇವೆಗೆ ಆದ್ಯತೆ ನೀಡುತ್ತೇನೆ. ಮುಖ್ಯವಾಗಿ ಪೊಲೀಸ್ ಇಲಾಖೆ ಎಂದರೆ ಭ್ರಷ್ಟ ಇಲಾಖೆ ಎಂಬ ಕೆಟ್ಟ ಹಣೆಪಟ್ಟಿ ಇದ್ದು ಇದನ್ನು ನಿವಾರಿಸಲು ಆಡಳಿತದಲ್ಲಿ ಪಾರದರ್ಶಕತೆಗೆ ಮಾನ್ಯತೆ ನೀಡುತ್ತೇನೆ. ಸಾಮಾನ್ಯ ಪ್ರಜೆಯೂ ಯಾವುದೇ ರಾಜಕೀಯ ಒತ್ತಡ ಇಲ್ಲದೆ ಠಾಣೆಗೆ ಬಂದು ದೂರು ನೀಡಬಹುದು. ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರೇ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು  ತಿಳಿಸಿದರು.

ಇತ್ತೀಚೆಗೆ ನಗರದಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರುತ್ತಿದ್ದು ಅದನ್ನು ಮೊದಲು ಮಟ್ಟಹಾಕಲು ಕ್ರಮಕೈಗೊಳ್ಳುತ್ತೇನೆ. ಕಾನೂನು ಸುವ್ಯಸ್ಥೆಗೆ ಭಂಗ ತರುವ ಕೋಮುವಾದಿ ಸಂಘಟನೆಗಳು ಹಾಗೂ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಯಾವುದೇ ಕೆಲಸಗಳಿಗೆ ನಗರದಲ್ಲಿ ಆಸ್ಪದ ಕೊಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ವೇಳೆ ಡಿಸಿಪಿಗಳಾದ ಡಾ.ಹೆಚ್.ಟಿ.ಶೇಖರ್, ರುದ್ರಮುನಿ, ಕಿತ್ತೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: