ಮೈಸೂರು

ಕಟ್ಟಡ ಕೆಡವಲು ಬಿಡುವುದಿಲ್ಲ, ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ :ವ್ಯಾಪಾರಸ್ಥರ ಪಟ್ಟು

ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೇವರಾಜ ಮಾರುಕಟ್ಟೆಯನ್ನು ಕೆಡವಿ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರ ಆದೇಶಿಸಿರುವ ಬೆನ್ನ ಹಿಂದೆಯೇ ಅಲ್ಲಿನ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಕಟ್ಟಡವನ್ನು ಕೆಡವಲು ಬಿಡುವುದಿಲ್ಲ. ಕಾನೂನು ಹೋರಾಟದ ಮೂಲಕ ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಈ ಸಂಬಂಧ ಜಗನ್ಮೋಹನ ಅರಮನೆಯಲ್ಲಿ ಕರೆಯಲಾಗಿದ್ದ ದೇವರಾಜ ಮಾರುಕಟ್ಟೆ ಮಳಿಗೆದಾರರು, ಬಾಡಿಗೆದಾರರು ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಗಿದೆ. ಸರ್ಕಾರ ದೇವರಾಜ ಮಾರುಕಟ್ಟೆಯನ್ನು ಪುನರ್ ನಿರ್ಮಿಸಲು ಯೋಜನೆ ರೂಪಿಸಿದ ಹಿನ್ನಲೆಯಲ್ಲಿ ಏಳು ದಿನಗಳ ಒಳಗೆ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಹಾಗೂ ಬಾಡಿಗೆದಾರರು ತಮ್ಮ ಸ್ಥಳವನ್ನು ತೆರವುಗೊಳಿಸಿ ದೇವರಾಜ ಮಾರುಕಟ್ಟೆ ಮರು ನಿರ್ಮಾಣ ಕಾಮಗಾರಿ ನಡೆಸಲು ಅನುವು ಮಾಡಿಕೊಡುವಂತೆ ನೋಟಿಸ್ ನೀಡಿರುವುದನ್ನು  ವ್ಯಾಪಾರಸ್ಥರು ತೀವ್ರವಾಗಿ ಖಂಡಿಸಿದ್ದಾರೆ.

ಈ ವೇಳೆ ಮದ್ರಾಸ್‍ನ ರಾಷ್ಟ್ರೀಯ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕೇಂದ್ರದ ತಜ್ಞ ಅರುಣ್ ಮೆನನ್ ಮಾತನಾಡಿ, ಮೈಸೂರು ಕೇವಲ ಸಾಂಸ್ಕೃತಿಕ ನಗರಿ ಮಾತ್ರವಲ್ಲದೆ ಅರಮನೆಗಳ ನಗರಿ, ಪಾರಂಪರಿಕ ಕಟ್ಟಡಗಳ ನಗರಿಯೂ ಹೌದು. ನಗರದ ಅಂದವನ್ನು ಇಲ್ಲಿನ ನೂರಾರು ಕಟ್ಟಡಗಳು ಹೆಚ್ಚಿಸಿವೆ. ಇಂತಹ ಕಟ್ಟಡಗಳನ್ನು ಉಳಿಸಿಕೊಳ್ಳಬೇಕಿರುವುದು ನಮ್ಮೆಲ್ಲರ ಹೊಣೆಯಾಗಿದ್ದು ಅದಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಈಗಾಗಲೇ ಪ್ರಕೃತಿ ವಿಕೋಪಗಳಿಂದ ಕಾಶ್ಮೀರದಲ್ಲಿ, ಸುನಾಮಿಯಿಂದ ತಮಿಳುನಾಡಿನಲ್ಲಿ ಹಾಗೂ ಕೇದಾರನಾಥದಲ್ಲಿ ಪಾರಂಪರಿಕ ಕಟ್ಟಡಗಳನ್ನು ಕಳೆದುಕೊಂಡಿದ್ದೇವೆ. ಇದನ್ನೂ ಕಳೆದುಕೊಳ್ಳುವುದು ಬೇಡ ಎಂದರು.

ಚೆನ್ನೈ, ಪಾಂಡಿಚೇರಿ, ತಿರುಪತಿ, ಇಟಲಿ, ಕೊಲಂಬಿಯಾ ಮುಂತಾದ ಕಡೆಗಳಲ್ಲಿ ಪಾರಂಪರಿಕ ಕಟ್ಟಡಗಳು ಹಾನಿಗೊಳಗಾದಂತಹ ಸಂದರ್ಭದಲ್ಲಿ ಪಾರಂಪರಿಕ ಕಟ್ಟಡವನ್ನು ಒಡೆಯದೇ ಅವುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅಂತಹ ಕಟ್ಟಡಗಳಿಗೆ ಹೋಲಿಸಿದರೆ ದೇವರಾಜ ಮಾರುಕಟ್ಟೆ ಸಮಸ್ಯೆ ಖಂಡಿತ ಕ್ಲಿಷ್ಟವಾದುದಲ್ಲ. ದೇವರಾಜ ಮಾರುಕಟ್ಟೆ ಕಟ್ಟಡ ಪ್ರಸ್ತುತವಾಗಿ ಒಡೆದು ಹಾಕುವಷ್ಟು ಹಾಳಾಗಿಲ್ಲ. ಕೆಲವು ಭಾಗ ಮಾತ್ರ ಹಾನಿಗೊಳಗಾಗಿದೆ. ಸೂಕ್ತ ಯೋಜನೆಗಳನ್ನು ಹಾಕಿಕೊಂಡು ಅದನ್ನು  ಸರಿಪಡಿಸಬಹುದು. ಕಟ್ಟಡದ ವಿನ್ಯಾಸ ಸುಂದರವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಬಳಸಿರುವಂತಹ ಮರದ ಜಂತಿಗಳು ಇನ್ನೂ ಚೆನ್ನಾಗಿವೆ. ಕೆಲವು ಗೋಡೆಗಳ ಚಕ್ಕೆಗಳು ಮಾತ್ರ ಉದುರುತ್ತಿವೆ. ಅವುಗಳನ್ನು ಪುನರ್ ನಿರ್ಮಿಸಬಹುದು ಎಂದು ಹೇಳಿದರು.

ಬಳಿಕ ಮಾತನಾಡಿದ ಬಾಡಿಗೆದಾರರ ಸಂಘದ ಅಧ್ಯಕ್ಷ ಮಹದೇವು, ದೇವರಾಜ ಮಾರುಕಟ್ಟೆ ಕೇವಲ ವ್ಯಾಪಾರ ಕೇಂದ್ರವಷ್ಟೇ ಅಲ್ಲ ಅದು ನಮ್ಮ ರಾಜಾಡಳಿತ, ಸಂಸ್ಕೃತಿಯನ್ನು ಬಿಂಬಿಸುವ ಕುರುಹು. ಅದರ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಕಾನೂನು ಹೋರಾಟ ಮಾಡಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಸರ್ಕಾರಕ್ಕೆ ವರದಿ ನೀಡಿರುವ ತಜ್ಞರ ತಂಡ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಒಡೆದು ಕಟ್ಟುವುದೇ ಸೂಕ್ತವೆಂದು ವರದಿ ನೀಡಿದೆ. ಆದರೆ, ತಜ್ಞರ ವರದಿ ಮೇಲೆ ದೇವರಾಜ ಮಾರುಕಟ್ಟೆ ಬಾಡಿಗೆದಾರರು ಹಾಗೂ ಸಾಮಾನ್ಯ ಜನರಿಗೆ ಅನುಮಾನ ಬಂದಿದೆ. ಈ ಹಿನ್ನಲೆಯಲ್ಲಿ ಮದ್ರಾಸಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ತಜ್ಞರಾದ ಅರುಣ್ ಮೆನನ್ ಅವರಿಂದ ಕಟ್ಟಡವನ್ನು ಸಂಪೂರ್ಣ ಪರಿಶೀಲನೆ ನಡೆಸಿ ವರದಿಯನ್ನು ಸಿದ್ದಪಡಿಸಲಾಗಿದೆ. ಸರ್ಕಾರದ ವರದಿ ಮತ್ತು ನಾವು ಸಿದ್ದಪಡಿಸಿರುವ ವರದಿಯನ್ನು ನ್ಯಾಯಾಲಯವೇ ಪರಿಶೀಲಿಸಿ ಕಟ್ಟಡದ ಉಳಿವು ಅಳಿವಿನ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಎನ್‍ಐಇ ಕಾಲೇಜಿನ ಪ್ರಾಧ್ಯಾಪಕ ಎನ್.ಸುರೇಶ್, ಎಂಜಿನಿಯರ್ ಎ.ಎಸ್.ಸತೀಶ್, ಲಾನ್ಸ್‍ಡೌನ್ ಕಟ್ಟಡದ ಬಾಡಿಗೆದಾರರ ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು

Leave a Reply

comments

Related Articles

error: