Uncategorized

ಬೌದ್ಧ ಬಿಕ್ಷುಗಳ ಬಂಧನಕ್ಕೆ ವಿರೋಧ : ಟಿಬೆಟಿಯನ್ ನಿರಾಶ್ರಿತರ ಸಂಘಟನೆಗಳಿಂದ ಪ್ರತಿಭಟನೆ

ಚೀನಾ ಆಕ್ರಮಿತ ಟಿಬೆಟ್‍ನಲ್ಲಿನ ಸೆರ್ಟಾ ಲಾರಂಗ್ ಗಾರಿಗ್ ಬೌದ್ಧ ಅಕಾಡೆಮಿಯನ್ನು ಆಕ್ರಮಿಸಿಕೊಂಡ ಚೀನಾ ಸರ್ಕಾರ ಅದರಲ್ಲಿದ್ದ ಬೌದ್ಧ ಬಿಕ್ಷುಗಳು ಹಾಗೂ ಸನ್ಯಾಸಿನಿಯರನ್ನು ಬಂಧಿಸಿರುವುದನ್ನು ಖಂಡಿಸಿ ವಿವಿಧ ಟಿಬೆಟಿಯನ್ ನಿರಾಶ್ರಿತರ ಸಂಘಟನೆಗಳು  ಪ್ರತಿಭಟನೆ ನಡೆಸಿತ್ತು.

ಮೈಸೂರು  ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಚೀನಿಯರೇ, ಟಿಬೆಟ್‍ನಲ್ಲಿ ಲಾರಂಗ್ ಗಾರ್ ಅನ್ನು ನಾಶ ಪಡಿಸುವುದನ್ನು ನಿಲ್ಲಿಸಿ. ನಾವು ಲಾರಂಗ್ ಗಾರ್ ಜತೆಗೆ ಇರುತ್ತೇವೆ ಎಂಬ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಾ ಚೀನಿಯರ ಈ ಕ್ರಮ ಅಮಾನವೀಯವಾದದ್ದು. ವಿಶ್ವದ ಎಲ್ಲ ಶಾಂತಿ ಪ್ರಿಯರು ಅದನ್ನು ಖಂಡಿಸಬೇಕೆಂದು ಮನವಿ ಮಾಡಿದರು.

ಬೈಲುಕುಪ್ಪೆ, ಹುಣಸೂರು ಮತ್ತು ಕೊಳ್ಳೇಗಾಲದ ಪ್ರಾದೇಶಿಕ ಟಿಬೆಟಿಯನ್ ಮಹಿಳಾ ಸಂಘ, ಟಿಬೆಟಿಯನ್ ಯುವ ಕಾಂಗ್ರೆಸ್‍ಗಳು ಬೃಹತ್ ಜಾಥಾ ನಡೆಸಿ, ಬೌದ್ಧ ಅಕಾಡೆಮಿ ನಾಶವನ್ನುವಿರೋಧಿಸಿದವು. ಅಲ್ಲದೆ ಬಂಧಿಸಿರುವ ಬೌದ್ಧ ಭಿಕ್ಷುಗಳು ಹಾಗೂ ಸನ್ಯಾಸಿನಿಯರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದರು.

ಸೆರ್ಟಾ ಲಾರಂಗ್ ಗಾರಿಗ್ ಬೌದ್ಧಿಕ ಅಕಾಡೆಮಿಯಲ್ಲಿ ಟಿಬೆಟ್‍ನ ವಿವಿಧ ಪ್ರದೇಶಗಳಿಂದ ಬಂದ ಬೌದ್ಧ ಭಿಕ್ಷುಗಳು ಹಾಗೂ ಸನ್ಯಾಸಿನಿಯರು ಅಭ್ಯಸಿಸುತ್ತಿದ್ದರು. ಜೊತೆಗೆ ಅದು ಬಲವಾದ ಧಾರ್ಮಿಕ ತತ್ವ ಹಾಗೂ ಉಪ ಭಾಷೆಯಾಗಿದ್ದು, ಅದರ ಅನುಯಾಯಿಗಳು ಪ್ರಪಂಚದಾದ್ಯಂತ ಖ್ಯಾತರಾಗಿದ್ದರಲ್ಲದೆ, ಬೌದ್ಧ ಧರ್ಮದ ತತ್ವ ಪ್ರಚಾರ ಮತ್ತು ಸಂಸ್ಕೃತಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.. ಇದನ್ನು ಸಹಿಸದ ಚೀನಾ ಸರ್ಕಾರ ಅಲ್ಲಿನ ಧಾರ್ಮಿಕ ತರಬೇತಿ ಮಿತಿಗೊಳಿಸಿ, ಅಭ್ಯಸಿಸಲು ಆಗಮಿಸುವವರ ಸಂಖ್ಯೆಯನ್ನೂ ಕಡಿತಗೊಳಿಸಿದೆ. ಅಲ್ಲದೆ ಅವರನ್ನು ಹೊರ ಕಳಿಸುವ ಕೆಲಸ ನಡೆದು, ವಸತಿ ಗೃಹಗಳನ್ನು ಒಡೆದ ಬಳಿಕ ಈಗ ಅದನ್ನು ನಾಶಗೊಳಿಸಿ, ಅಲ್ಲಿದ್ದವರ ಸೆರೆಮನೆಯನ್ನಾಗಿಸುವ ಕೆಲಸ ಚೀನಾ ಸರ್ಕಾರ ಮಾಡಿದೆ ಎಂದು ದೂರಿದರು.

ಭಾರತ ಸರ್ಕಾರ ಹಾಗೂ ಇತರ ಸರ್ಕಾರಗಳು ಮಧ್ಯೆ ಪ್ರವೇಶಿಸಿ ಬೌದ್ಧ ಅಕಾಡೆಮಿ ತನ್ನ ಎಂದಿನ ಚಟುವಟಿಕೆ ನಡೆಸಲು ಅನುವು ಮಾಡಿಕೊಡುವಂತೆ ಚೀನಿ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕೋರಿದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

Leave a Reply

comments

Related Articles

error: