ಪ್ರಮುಖ ಸುದ್ದಿಮೈಸೂರು

ಸರ್ಕಾರಿ ಬಸ್ – ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಜವರಾಯನ ಅಟ್ಟಹಾಸಕ್ಕೆ ಐವರು ಬಲಿ

ಹಲವಾರು ಕನಸುಗಳ ಮೂಟೆ ಹೊತ್ತು ಸಾಗುತ್ತಿದ್ದವರಿಗೆ ಬಹುಶಃ ನಾವಿಂದು ಮರಳಿ ಬಾರದ ಲೋಕಕ್ಕೆ ತೆರಳುತ್ತೇವೆ, ಜವರಾಯ ನಮಗಾಗಿ ಕಾದು ಕುಳಿತಿದ್ದಾನೆ ಎನ್ನುವ ಸುಳಿವು ಕೊಂಚವೂ ಇರಲಿಕ್ಕಿಲ್ಲ. ಆದರೆ ಜವರಾಯನ ಅಟ್ಟಹಾಸಕ್ಕೆ ಮೇಲುಗೈ ದೊರಕಿತ್ತು. ಮೈಸೂರಿನ ಹೊರವಲಯದ ಬನ್ನಿಕುಪ್ಪೆಯ ಮಧುಗಿರಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಅಕ್ಕಿಮೂಟೆ ತುಂಬಿದ ಅಶೋಕ್ ಲೈಲ್ಯಾಂಡ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ದುರಂತದಲ್ಲಿ  ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಭೀಕರ ಅಪಘಾತದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಕೆ.ಆರ್.ಪೇಟೆ ಮೂಲದ ಸದಾಶಿವ ಹಾಗೂ ನಿರ್ವಾಹಕ ಹರಿಹರ ಮೂಲದ, ಹೆಚ್.ಡಿ.ಕೋಟೆಯಲ್ಲಿ ವಾಸಿಸುತ್ತಿರುವ ಬಿ.ದೇವರಾಜು, ಆಂಧ್ರ ಪ್ರದೇಶದ ಕರ್ನೂಲ್ ನವರಾದ ಲಾರಿ ಚಾಲಕ ಅಂಜಿ ಮತ್ತು ಕ್ಲೀನರ್  ರಾಮಂಜಿ ಗುಂಟೂರು, ಪ್ರಯಾಣಿಕ ರಾಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವರು ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಸಿಂಧುವಳ್ಳಿಯ ಮುಕುಂದ, ಮಳಗನಕೆರ ಗ್ರಾಮದ ಸಂತೋಷ್, ಹಿರಿಕ್ಯಾತನ ಹಳ್ಳಿಯ ರಾಮಸ್ವಾಮಿ, ಶ್ರೀಮಂಗಲದ ತಂಗಮ್ಮ ಎಂಬವರನ್ನು ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನೂ ಕೆಲವು ಗಾಯಗೊಂಡ ಪ್ರಯಾಣಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ ಹುಣಸೂರಿನಿಂದ ಮೈಸೂರು ಕಡೆ ಚಲಿಸುತ್ತಿದ್ದಾಗ ಎದುರುಗಡೆಯಿಂದ ಆಂಧ್ರದಿಂದ ಹುಣಸೂರಿಗೆ ಅಕ್ಕಿಚೀಲಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಗೆ ಬಲವಾಗಿ ಗುದ್ದಿದೆ. ಇದರಿಂದ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಕ್ಕಿಚೀಲಗಳು ಸೋರಿಕೆಯಾಗಿದ್ದು, ರಸ್ತೆಯ ತುಂಬೆಲ್ಲ ಹರಡಿಕೊಂಡಿದೆ. ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ಹಾಗೂ ಬಿಳಿಕೆರೆ ಠಾಣಾ ಪೊಲೀಸರು ಮತ್ತು ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ ಘಟನೆಗೆ ಮುಂಜಾನೆಯಲ್ಲಿ ಕವಿದ ಮಬ್ಬಿನ ವಾತಾವರಣ ಕಾರಣವಾಗಿದೆ. ಮೇಲ್ನೋಟಕ್ಕೆ ಬಸ್ ಡ್ರೈವರ್ ಓವರ್ ಟೇಕ್ ಮಾಡಲು ಯತ್ನಿಸಿದ್ದರೇ ಎಂಬ ಅನುಮಾನ ಮೂಡುತ್ತಿದೆ. ಆದರೆ ಅದನ್ನೆ ನಂಬುವಂತಿಲ್ಲ. ಈ ಕುರಿತು ಸಂಪೂರ್ಣ ತನಿಖೆಗೆ ಆದೇಶ ನೀಡಲಾಗಿದೆ ಎಂದರು. ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಅಕ್ಕಿ ಮೂಟೆ ಹೊತ್ತೊಯ್ಯುತ್ತಿರುವ ಸಾರ್ವಜನಿಕರು!

ಲಾರಿಯಲ್ಲಿ ತುಂಬಿಸಿ ತರುತ್ತಿದ್ದ ಅಕ್ಕಿಮೂಟೆಗಳು ಅಪಘಾತದ ರಭಸಕ್ಕೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇದನ್ನು ಸಾರ್ವಜನಿಕರು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿರುವುದು ಕಂಡುಬಂತು. ದುರಂತದ ಸಮಯದಲ್ಲೂ ಸಾರ್ವಜನಿಕರು ಮಾನವೀಯತೆಯನ್ನು ಮರೆತಂತಿದೆ.

Leave a Reply

comments

Related Articles

error: