ಕರ್ನಾಟಕ

ಪಶುವೈದ್ಯಕೀಯ ಚಿಕಿತ್ಸಾಲಯದಲ್ಲಿ ದ್ರವಸಾರಜನಕ ಶೇಖರಣೆಗೆ ಸೈಲೋ ಟ್ಯಾಂಕ್

ಮಂಡ್ಯ, ಸೆ.2 : ದನ, ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡುವ ಸಲುವಾಗಿ ವೀರ್ಯನಳಿಕೆಗಳನ್ನು ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ದ್ರವಸಾರಜನಕ ಜಾಡಿಗಳಲ್ಲಿ ಶೇಖರಿಸಿಡಲಾಗುತ್ತದೆ.

ದ್ರವಸಾರಜನಕವು ನಿರಂತರವಾಗಿ ಆವಿಯಾಗುವ ಪ್ರವೃತ್ತಿಯ ದ್ರವವಾಗಿರುವುದರಿಂದ ಪ್ರತಿ ಪಶುವೈದ್ಯಕೀಯ ಸಂಸ್ಥೆಯಲ್ಲಿರುವ ದ್ರವಸಾರಜನಕ ಜಾಡಿಗಳಿಗೆ ತಿಂಗಳಿಗೊಮ್ಮೆ ದ್ರವಸಾರಜನಕವನ್ನು ತುಂಬಿಸಲಾಗುತ್ತಿತ್ತು. ಮಂಡ್ಯ ಜಿಲ್ಲೆಗೆ ಪ್ರತಿ ತಿಂಗಳು ದ್ರವಸಾರಜನಕವನ್ನು ಬೆಂಗಳೂರಿನಿಂದ ಖಾಲಿ ಕಂಟೈನರ್‍ಗಳಲ್ಲಿ ತುಂಬಿಸಿಕೊಂಡು ಬಂದು ನೇರವಾಗಿ ಪಶುವೈದ್ಯಕೀಯ ಸಂಸ್ಥೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ) ಅಡಿ ಮಂಡ್ಯ, ಮಂಗಳೂರು, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಬೆಳಗಾವಿ, ವಿಜಾಪುರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ದ್ರವಸಾರಜನಕವನ್ನು ಶೇಖರಿಸಲು ಸರ್ಕಾರ ಸೈಲೋ ಟ್ಯಾಂಕ್ ಅನ್ನು ಅಳವಡಿಸಿದೆ.

ಆರ್.ಕೆ.ವಿ.ವೈ ಯೋಜನೆಯಡಿ ರಾಜ್ಯವಲಯ ಅನುದಾನದಲ್ಲಿ ಜೂನ್ 2017 ರಲ್ಲಿ ಮಂಡ್ಯ ನಗರ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ 5000 ಲೀಟರ್ ಸಾಮಾರ್ಥ್ಯದ ಸೈಲೋ ಟ್ಯಾಂಕ್ ಅನ್ನು ಅಳವಡಿಸಿ ದ್ರವಸಾರಜನಕವನ್ನು ಶೇಖರಿಸಿಡಲಾಗಿದೆ.

ಮಂಡ್ಯ ಜಿಲ್ಲೆಯ ಎಲ್ಲ ಪಶುವೈದ್ಯಕೀಯ ಸಂಸ್ಥೆಗಳಿಗೆ ಸರಾಗವಾಗಿ ದ್ರವಸಾರಜನಕವನ್ನು ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ಕೃತಕ ಗರ್ಭಧಾರಣೆ ಕಾರ್ಯವನ್ನು ಯಾವುದೇ ಕುಂದುಕೊರತೆ ಇಲ್ಲದೆ ನಡೆಸಿಕೊಂಡು ಹೋಗಲು ಅನುಕೂಲವಾಗಿದ್ದು, ಜಾನುವಾರುಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸಲು ವೀರ್ಯನಳಿಕೆಗಳ ಗುಣಮಟ್ಟ ಕಾಪಾಡಲು ಕ್ರಮವಹಿಸಲಾಗಿದೆ.

ಕೃತಕ ಗರ್ಭಧಾರಣೆಗಾಗಿ ದ್ರವಸಾರಜನಕವನ್ನು ಶೇಖರಣೆ ಮಾಡುವ 5000 ಲೀಟರ್ ಸಾಮಾರ್ಥ್ಯದ ಸೈಲೋ ಟ್ಯಾಂಕ್ ಮಂಡ್ಯ ಜಿಲ್ಲೆಯಲ್ಲಿ ಅಳವಡಿಕೆಯಾಗಿರುವುದು ಹೈನುಗಾರಿಕೆಯಲ್ಲಿ ಆರ್ಥಿವಾಗಿ ಅಭಿವೃದ್ಧಿ ಹೊಂದಲು ಮುಂದಾಗಿರುವ ರೈತರಿಗೆ ಸಂತಸದ ವಿಷಯವಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಪ್ರಕಾಶ್ ಹೇಳಿದ್ದಾರೆ.

-ಎನ್.ಬಿ.

Leave a Reply

comments

Related Articles

error: