ಕ್ರೀಡೆಮೈಸೂರು

ಜಿಲ್ಲಾ ಪತ್ರಕರ್ತರ ಸಂಘದ ಕ್ರಿಕೆಟ್ ಪಂದ್ಯಾವಳಿ : ರಾಮು ತಂಡಕ್ಕೆ 12 ರನ್‌ಗಳ ರೋಚಕ ಜಯ  

ಮೈಸೂರು ಸೆ.2 : ದೂರದರ್ಶನದ ರಾಮು ನೇತೃತ್ವದ ಟ್ರೆಷರರ್ ಇಲವೆನ್ ತಂಡವು ವಿಜಯವಾಣಿಯ ಹಿರಿಯ ವರದಿಗಾರ ಆರ್.ಕೃಷ್ಣ ನೇತೃತ್ವದ ಅಧ್ಯಕ್ಷರ ಇಲವೆನ್ ತಂಡದ ವಿರುದ್ಧ 12 ರನ್‌ಗಳ ಅಂತರದ ರೋಚಕ ಜಯಸಾಧಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸೀಮಿತ 8 ಓವರ್‌ಗಳ ಟೆನಿಸ್ ಬಾಲ್ ನಾಕ್‌ಔಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದವು.

ಮೊದಲನೆ ಪಂದ್ಯದಲ್ಲಿ ಅಧ್ಯಕ್ಷರ ಇಲವೆನ್ ತಂಡವು ರಕ್ಷಿತ್ ನೇತೃತ್ವದ ಪ್ರಧಾನ ಕಾರ‍್ಯದರ್ಶಿ ಇಲವೆನ್ ವಿರುದ್ದ  3 ರನ್‌ನಿಂದ ರೋಮಾಂಚಕ ಜಯಗಳಿಸಿತು.

ಮೊದಲು ಬ್ಯಾಟ್ ಮಾಡಿದ ಅಧ್ಯಕ್ಷರ ಇಲವೆನ್ ತಂಡಕ್ಕೆ ಚಂದ್ರು (26), ರವಿನಂದನ್ (27), ಬಸಂತ್ (15) ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವು 7 ವಿಕೆಟ್ ನಷ್ಟಕ್ಕೆ 99 ರನ್ ಗಳನ್ನು  ಕಲೆ ಹಾಕಿದರು.

ಪ್ರತ್ಯುತ್ತರವಾಗಿ ಪ್ರಧಾನ ಕಾರ‍್ಯದರ್ಶಿಗಳ ತಂಡದ ಪರ ಸಿ.ದಿನೇಶ್( 16) ಮತ್ತು ಸುರೇಶ್(18) ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 96ರನ್ ಗಳಿಸಲಷ್ಟೇ ಸಾಧ್ಯವಾಗಿ ಮೂರು ರನ್‌ಗಳಿಂದ ಸೋಲು ಅನುಭವಿಸಿತು.

ಮೂರು ವಿಕೆಟ್ ಕಬಳಿಸಿದ ರವಿನಂದನ್ ಅವರನ್ನು ಪಂದ್ಯದ ಪುರುಷೋತ್ತಮ ಎಂದು ಘೋಷಿಸಲಾಯಿತು.

ಕಾರ‍್ಯದರ್ಶಿ ಇಲವೆನ್ ಮತ್ತು ಖಜಾಂಚಿ ಇಲವೆನ್ ತಂಡಗಳ ನಡುವೆ ನಡೆದ ಎರಡನೇ ಪಂದ್ಯವೂ ಅತ್ಯಂತ ರೋಮಾಂಚನಕಾರಿ ರೀತಿಯಲ್ಲಿ ಅಂತ್ಯಗೊಂಡಿತು.

ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಮು ನೇತೃತ್ವದ ತಂಡವು ನಿಗದಿತ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ  103 ರನ್ ಕಲೆ ಹಾಕಿತು. ತಂಡದ ಪರ ಸುರೇಶ್ ಔಟಾಗದೆ 25, ಜ್ಞಾನೇಶ್  15 ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದರು.

ಇದಕ್ಕೆ ಪ್ರತ್ಯುತ್ತರವಾಗಿ ಕಾರ‍್ಯದರ್ಶಿಗಳ ಇಲವೆನ್ ತಂಡವು ರಾಘವೇಂದ್ರ (27), ಮಹೇಶ್  (28),ರಾಕೇಶ್ (11) ಚಂದ್ರಶೇಖರ್ (10) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಸಹಾಯವಿದ್ದರೂ, ನಿಗದಿತ 8 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 100 ರನ್ ಗಳಿಸುವಷ್ಟೇ ಶಕ್ಯವಾಗಿ ಸೋಲು ಅನುಭವಿಸಿತು.

ಇನ್ನು ಅಧ್ಯಕ್ಷರ ಇಲವೆನ್ ಮತ್ತು ಖಜಾಂಚಿ ಇಲವೆನ್ ತಂಡದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಮು ತಂಡವು, ಆರಂಭಿಕ ಆಟಗಾರ ರಾಕೇಶ್ (34), ಜ್ಞಾನೇಶ್ (ಔಟಾಗದೆ 44) ಮತ್ತು ಸುರೇಶ್ (27) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 8 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತು.

ಇದಕ್ಕೆ ಪ್ರತ್ಯುತ್ತರವಾಗಿ ಅಧ್ಯಕ್ಷರ ಇಲವೆನ್ ರವಿನಂದನ್ (35), ಮನು (25) ಮತ್ತು ರವಿ ಪಾಂಡವಪುರ (17) ಅವರ ಭರ್ಜರಿ ಪ್ರದರ್ಶನದ ನಡುವೆಯೂ 8 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಕೇವಲ 106 ಗನ್ ಗಳಿಸಲು ಸಾಧ್ಯವಾಯಿತು.

ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚಿದ ರಾಕೇಶ್ ಪಂದ್ಯದ ಅತ್ಯುತ್ತಮ ಬೌಲರ್ ಪ್ರಶಸ್ತಿ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿ, ಅಧ್ಯಕ್ಷರ ಇಲವೆನ್‌ನ ರವಿನಂದನ್ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ವಿಜಯಕರ್ನಾಟಕ ಪತ್ರಿಕೆ ಮುದ್ರಣ ವಿಭಾಗದ ಜ್ಞಾನೇಶ್ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: