ಮೈಸೂರುಸಿಟಿ ವಿಶೇಷ

ಮೈಸೂರಲ್ಲೇ ರೂಪ ತಳೆದ ಆದರ್ಶ ಗ್ರಾಮ!

ಭಾರತ ಹಳ್ಳಿಗಳ ದೇಶ, ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎನ್ನುವುದು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಅಚಲ ನಂಬಿಕೆಯಾಗಿತ್ತು. ಇಂದಿಗೂ ಪಂಚಾಯತ್ ವ್ಯವಸ್ಥೆಯ ಮೂಲಕ ಈ ಆಶಯದಂತೆಯೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಸುಲಲಿತ ರಾಜ್ಯಾಡಳಿತಕ್ಕೆ ಅಧಿಕಾರ ವಿಕೇಂದ್ರಿಕರಣಗೊಳಿಸಿ ಗ್ರಾಮ ಪಂಚಾಯತ್ ಸ್ಥಾಪಿಸಲಾಗಿದೆ. ಜನಸಂಖ್ಯೆಗನುಗುಣವಾಗಿ ಪ್ರತಿ ಗ್ರಾಮ ಪಂಚಾಯಿತಿಗೂ ಅದರದೇ ಆದ ರೂಪರೇಷೆ ಹಾಗೂ ಕಾರ್ಯಚಟುವಟಿಕೆ ನಿಲುವಳಿಯನ್ನು ಹೊಂದಿದೆ, ಆದರ್ಶ ಗ್ರಾಮ ಯೋಜನೆಯಲ್ಲೂ ತನ್ನದೇ ಆದ ನೆಲೆಗಟ್ಟಿನಲ್ಲಿ ಜವಾಬ್ದಾರಿಗಳನ್ನು ನಿಗದಿಗೊಳಿಸಲಾಗಿದೆ.

whatsapp-image-2016-10-26-at-10-09-13-am-5

ಆದರ್ಶ ಗ್ರಾಮ: ಗ್ರಾಮದ ಜನಜೀವನ ಮಟ್ಟ ಸುಧಾರಿಸುವುದು, ಸ್ವಯಂ ಉದ್ಯೋಗವಕಾಶ ಸೃಷ್ಠಿಸಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ನೂತನ ಕೃಷಿ ಪದ್ಧತಿ, ಬೆಳೆ ಪದ್ಧತಿಯ ಮೂಲಕ ಕೃಷಿ ಉತ್ಪಾದನೆ ಮಾಡುವುದು. ಪ್ರತಿ ಮನೆಗೂ ಶೌಚಾಲಯ, ಸುಂದರವಾದ ಬಯಲು ರಂಗಮಂದಿರ, ಸುಸಜ್ಜಿತವಾದ ಡಾಂಬರ್ ರಸ್ತೆ, ವಿವಿಧ ಇಲಾಖೆಗಳ ಮಾಹಿತಿ ಕೇಂದ್ರ, ಮಹಿಳಾ ಅಭಿವೃದ್ಧಿಗೆ ಸ್ತ್ರೀ ಸ್ವಸಹಾಯ ಗುಂಪುಗಳ ಉತ್ತೇಜನ, ಗುಡಿ ಕೈಗಾರಿಕೆಗಳಾದ ಕುಂಬಾರಿಕೆ, ಬುಟ್ಟಿ ಹೆಣೆಯುವುದು, ಚಮ್ಮಾರಿಕೆ, ಉದ್ಯಮಗಳನ್ನು ಪ್ರೋತ್ಸಾಹಿಸುವುದು ಸೇರಿದಂತೆ ನೆಮ್ಮದಿಯುತ ಜೀವನಕ್ಕೆ ಬೇಕಾಗುವ ಶಾಲಾ ಆಸ್ಪತ್ರೆ, ಪಶು ಸಂಗೋಪನೆ – ಇವೆಲ್ಲವೂ ಆದರ್ಶ ಗ್ರಾಮವೆನಿಸುವ ಗ್ರಾಮಗಳ ಮಾನದಂಡವಾಗಿದ್ದು ಇಂತಹ ಆದರ್ಶ ಗ್ರಾಮವೊಂದು ಮೈಸೂರಿನಲ್ಲಿಯೇ ಇದೆ ಎಂದರೆ ನೀವು ನಂಬಲೇಬೇಕು!

whatsapp-image-2016-10-26-at-10-09-13-am-1

ಹೌದೇ ಎಂದು ಹುಬ್ಬೇರಿಸಬೇಡಿ. ಈ ರೀತಿ ಸುಂದರ ಪರಿಕಲ್ಪನೆಯ ಆದರ್ಶ ಗ್ರಾಮವಿರುವುದು ಮೈಸೂರು ವಸ್ತು ಪ್ರದರ್ಶನದ ಸರ್ಕಾರಿ ಸಂತೆಯಲ್ಲಿ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಿಸಲಾಗಿರುವ ಆದರ್ಶ ಗ್ರಾಮದಡಿಯ ಮಳಿಗೆಯೂ ಪ್ರೇಕ್ಷಕರನಿಗೆ ಸುಂದರ ಗ್ರಾಮದ ಚಿತ್ರವನ್ನು ಕಣ್ಣಿಗೆ ಕಟ್ಟಿಕೊಡುವಂತಿದೆ.

ಗದುಗಿನ ಕಲಾವಿದ ರವಿಶಿಶುವಿನಹಳ್ಳಿ ಸುಮಾರು ಒಂದುವರೆ ತಿಂಗಳ ಕಾಲ ಶ್ರಮಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಿಂದ ಸುಂದರ ಮಾದರಿ ನಿರ್ಮಿಸಿದ್ದು ಪ್ರತಿಕೃತಿ ನೈಜವಾಗಿ ಮೂಡಿಬಂದಿದೆ. ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಸುಂದರ ಹಳ್ಳಿಯ ಚಿತ್ರಣ ಕಣ್ಣಿಗೆ ಕಟ್ಟುವಂತೆ ತೋರಿಸಲು ಇವರು ಹಾಕಿರುವ ಶ್ರಮ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

 

ಪ್ರವೇಶ ದ್ವಾರದಲ್ಲಿಯೇ  ವಿವಿಧತೆಯಲ್ಲಿ ಏಕತೆ ಎನ್ನುವ ಸಂದೇಶ ಸಾರುವ ವಿವಿಧ ಪ್ರಾಂತೀಯ ವೇಷಭೂಷಣ ತೊಟ್ಟ ಗೊಂಬೆಗಳು, ಹೊಲ ಉಳುವ ರೈತ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರು ನಿಮ್ಮನ್ನು ಕೈಬೀಸಿ ಗ್ರಾಮಕ್ಕೆ ಕರೆದೊಯ್ಯುವರು. ಒಳ ಪ್ರವೇಶಿಸುತ್ತಿದ್ದಂತೆ ಬಯಲು ರಂಗಮಂದಿರ, ಗುಡಿ ಕೈಗಾರಿಕೆಗಳ ಪ್ರಚಾರದ ಚಿತ್ರಗಳು ಅತ್ಯಂತ ಆಕರ್ಷಣೀಯವಾಗಿವೆ. ಊರೆಂದ ಮೇಲೆ ಅರಳಿಕಟ್ಟೆ ಇರಲೇಬೇಕು ಅಲ್ಲಿ ವಿವಿಧ ಸಮೂಹದವರ ಹರಟೆ, ಸಿದ್ದರಾಮನಹುಂಡಿಗೆ ಸುಸಜ್ಜಿತ ಡಾಂಬರ್ ರಸ್ತೆ, ಹೀಗೆ ಒಂದೇ ಎರಡೇ ಪ್ರತಿಯೊಂದೂ ಸುಂದರವಾಗಿದೆ. ಈಗಿನ ನಗರ ಜೀವನದ ಒತ್ತಡದ ವಾತಾವರಣದಿಂದ ನಗರದ ಮಕ್ಕಳಿಗೆ ಹಳ್ಳಿಗಳೆಂದರೆ ಕೇವಲ ಟಿವಿಯಲ್ಲಿ ಕಂಪ್ಯೂಟರ್ ಮೊಬೈಲ್ ನಲ್ಲಿ ತೋರಿಸುವ ಕಾಲ ಬಂದಿದೆ. ಇಂತಹವರು ತಮ್ಮ ಮಕ್ಕಳಿಗೆ ಗ್ರಾಮಗಳ ಜನಜೀವನವನ್ನು ಕಣ್ಣಿಗೆ ಕಟ್ಟುವಂತೆ ನಿರ್ಮಿಸಿರುವ ಈ ಮಳಿಗೆಗೆ ಮಕ್ಕಳನ್ನೊಮ್ಮೆ ಕರೆದುಕೊಂಡು ಹೋಗಿ ಗ್ರಾಮದ ಜನಜೀವನದ ಪರಿಚಯ ಮಾಡಿಸಬಹುದು. ಹಳ್ಳಿಯ ಪರಿಚಯ ಇರುವವರೂ ಒಮ್ಮೆ ಹಳ್ಳಿಯ ಪ್ರತಿಕೃತಿಯನ್ನು ನೋಡಿ ಆನಂದಪಡಬಹುದು.

ರೇಖಾ ಪ್ರಕಾಶ್. ಕೆ.ಎಂ.

whatsapp-image-2016-10-26-at-10-09-13-am

Leave a Reply

comments

Related Articles

error: