ದೇಶಪ್ರಮುಖ ಸುದ್ದಿ

ಸದ್ಯಕ್ಕೆ ಎಟಿಎಂ ಗಳಲ್ಲಿ 200 ರೂ.ನೋಟುಗಳು ಲಭ್ಯವಿಲ್ಲ

ನವದೆಹಲಿ, ಸೆ.4: ಹೊಸದಾಗಿ ಬಿಡುಗಡೆಯಾಗಿರುವ  200 ರೂ. ನೋಟು  ಸದ್ಯಕ್ಕೆ ಎಟಿಎಂ ಗಳಲ್ಲಿ ಲಭ್ಯವಿಲ್ಲ. ಗ್ರಾಹಕರಿಗೆ  ಎಟಿಎಂ ನಲ್ಲಿ ಸಿಗಲು ಇನ್ನೂ 3 ತಿಂಗಳು ಕಾಯಬೇಕಾಗುತ್ತದೆ. ಹೊಸ ನೋಟು ಬರುವಂತೆ ಮಾಡಲು ಎಟಿಎಂ ಯಂತ್ರದ ಒಳಗಿನ ವ್ಯವಸ್ಥೆಯನ್ನು ಬದಲಿಸಬೇಕಿದೆ. ಸದ್ಯಕ್ಕೆ ಆಯ್ದ ಆರ್ ಬಿ ಐ ಕಚೇರಿ ಮತ್ತು ಕೆಲವು ಬ್ಯಾಂಕ್ ಗಳಲ್ಲಿ ಮಾತ್ರ ಹೊಸ ನೋಟು ಲಭ್ಯವಿದೆ.

ಎಟಿಎಂ ಒಳ ವಿನ್ಯಾಸವನ್ನು ಬದಲಿಸುವ ಮೂಲಕ 200 ರೂ. ನೋಟು ಬರುವಂತೆ ಮಾಡಬೇಕಾಗಿದ್ದು,  ಈ ಬದಲಾವಣೆ ಮಾಡಲು ಕಾಲಾವಕಾಶ ಹಿಡಿಯಲಿದೆ. ಈಗಾಗಲೇ ಅನೇಕ ಬ್ಯಾಂಕ್ ಗಳು ಎಟಿಎಂ ಸಂಸ್ಥೆಗಳನ್ನು ಎಟಿಎಂ ವಿನ್ಯಾಸ ಬದಲಾವಣೆಗೆ ಕೋರಿವೆ. ಕಳೆದ ವರ್ಷವಷ್ಟೇ 2000 ರೂ. ಮುಖಬೆಲೆಯ ನೋಟು ಪೂರೈಕೆಗೆ ಪೂರಕವಾಗಿ ಎಟಿಎಂ ಯಂತ್ರದ ವಿನ್ಯಾಸವನ್ನು ಬದಲಿಸಲಾಗಿತ್ತು. ಇದೀಗ ಮತ್ತೊಂದು ಸುತ್ತಿನ ಬದಲಾವಣೆ ಮಾಡಬೇಕಾಗಿದೆ. ಇದಕ್ಕೆ ಯಾವುದೇ ಕಾಲಮಿತಿಯನ್ನು ಆರ್ ಬಿ ಐ ನೀಡಿಲ್ಲ. ದೈನಂದಿನ ಎಟಿಎಂ ಚಟುವಟಿಕೆಗೆ ತೊಂದರೆಯಾಗದಂತೆ ಹೊಸ ನೋಟು ಪೂರೈಕೆಯ ವ್ಯವಸ್ಥೆ ಮಾಡಲು ಕನಿಷ್ಠ ಮೂರು ತಿಂಗಳಾದರೂ ಬೇಕು. ಈ ಸಂಬಂಧ ಆರ್ಬಿಐನಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಎಟಿಎಂ ತಯಾರಕ ಸಂಸ್ಥೆಗಳು ಹೇಳಿವೆ.(ವರದಿ:ಎಲ್.ಜಿ)

 

Leave a Reply

comments

Related Articles

error: