ಮೈಸೂರುಸಿಟಿ ವಿಶೇಷ

ಪರಾವಲಂಬಿಯಾಗದೆ ಸ್ವಾವಲಂಬಿ ಜೀವನ ಕಟ್ಟಿಕೊಂಡ ಮಹಿಳೆ ಪಾರಿಜಾತ

ಇನ್ನೊಬ್ಬರ ಮುಂದೆ ದೇಹಿ ಎಂದು ಕೈಚಾಚುವುದಕ್ಕಿಂತ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ತುಡಿಯುವಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಪುರುಷರಿಗೆ ಸರಿಸಮನಾಗಿ ದುಡಿಯುತಾ ಬಡತನಕ್ಕೆ ಸೆಡ್ಡು ಹೊಡೆದು ಸಂಸಾರದ ನೊಗಕ್ಕೆ ಹೆಗಲೊಡ್ಡಿದವರಲ್ಲಿ ಇವರೂ ಒಬ್ಬರು.

ವೃತ್ತಿಗೆ ಮೇಲು ಕೀಳೆಂಬ ಬೇಧಭಾವವಿಲ್ಲ ಸಂಸಾರದ ಜವಾಬ್ದಾರಿ ನಿಭಾಯಿಸಲು, ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಶ್ರದ್ಧೆ ಪರಿಶ್ರಮದಿಂದ ದುಡಿದರೆ ಯಾವ ಉದ್ಯೋಗವಾದರೇನು ಕೈ ಹಿಡಿಯದೇ ಇರುವುದೇ ಎನ್ನುವುದು ಪಾರಿಜಾತ ಅವರ ನಂಬಿಕೆ.

ಯಾರೀ ಪಾರಿಜಾತ ಅಂತ್ತೀರಾ? ನೀವೊಮ್ಮೆ ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದಾಗ ತಿಂಡಿ ಚಾವಡಿ ಕಡೆ ಹೆಜ್ಜೆಹಾಕಿದರೆ ಬೆಲ್ಲ ಮತ್ತು ತುಪ್ಪದ ಘಮ ನಿಮ್ಮ ಮೂಗಿಗೆ ಬಡಿಯದೇ ಇರದು. ಘಮವನ್ನು ಹಿಂಬಾಲಿಸಿದರೆ ಅಲ್ಲೇ ‘ಸವಿರುಚಿ’ ಹೋಳಿಗೆ ವ್ಯಾಪಾರಿ ಪಾರಿಜಾತ ಕಣ್ಣಿಗೆ ಬೀಳುವರು.

ಕುವೆಂಪು ನಗರದ ನಿವಾಸಿಯಾದ ಪಾರಿಜಾತ ಅವರು ಸ್ವಯಂ ಉದ್ಯೋಗದ ಅನುಭವವನ್ನು ‘ಸಿಟಿಟುಡೆ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ… “ಇದೇ ಮೊದಲ ಬಾರಿಗೆ ಸ್ವಯಂ ಉದ್ಯೋಗಕ್ಕೆ ಕೈ ಹಾಕಿರುವೆ. ಹಲವಾರು ವರ್ಷ ದಸರಾ ವಸ್ತು ಪ್ರದರ್ಶನದಲ್ಲಿ ಟಿಕೆಟ್ ಕೌಂಟರ್ ನಲ್ಲಿ ಹಾಗೂ ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದೆ. ಅದೇನೋ ಅತೃಪ್ತಿ ಅಸಮಾಧಾನ ನನ್ನಲ್ಲಿಯೇ ಕಾಡುತ್ತಿತ್ತು. ಹೀಗಾಗಿ ಸ್ವತಂತ್ರವಾಗಿ ಹೋಳಿಗೆ ಮಳಿಗೆ ಹಾಕಿ ದುಡಿಯುತ್ತಿರುವೆ. ವಾರದ ದಿನಗಳಲ್ಲಿ ಮಧ್ಯಾಹ್ನ 2 ರಿಂದ ಹೋಳಿಗೆ ತಯಾರಿಗೆ ಸಿದ್ಧತೆ ಶುರು ಮಾಡ್ತೀವಿ. ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಬೆಳಿಗ್ಗೆಯಿಂದಲೇ ಸಿದ್ಧತೆ ಆರಂಭವಾಗುತ್ತದೆ. ಸಾಧಾರಣ ದಿನಗಳಲ್ಲಿ ಎರಡರಿಂದ ಎರಡುವರೆ ಸಾವಿರ ವ್ಯಾಪಾರವಾಗುವುದು. ವಿಶೇಷ ದಿನಗಳಲ್ಲಿ ವಹಿವಾಟು ಐದು ಸಾವಿರ ರೂಪಾಯಿ ಮೀರುತ್ತದೆ” ಮಂದಹಾಸದೊಂದಿಗೆ ತಿಳಿಸಿದರು.

ಪಾರಿಜಾತ ಅವರ ಇಬ್ಬರು ಮಕ್ಕಳು ಈಗಾಗಲೇ ಸ್ವಂತಂತ್ರ ಬದುಕು ಕಟ್ಟಿಕೊಂಡಿದ್ದಾರೆ. ಜವಾಬ್ದಾರಿ ಮುಗಿಯಿತು ಇನ್ನು ಮಕ್ಕಳ ಆದಾಯದಲ್ಲಿ ಜೀವನ ನಡೆಸಬೇಕೆನ್ನುವವರೇ ಸಮಾಜದಲ್ಲಿ ಇಂದು ಹೆಚ್ಚು. ಆದರೆ ಪಾರಿಜಾತ ಅವರು ಸುಮ್ಮನೆ ಕೂರಲು ಸಿದ್ಧರಿಲ್ಲ.

“ಸುಮ್ಮನೇ ಕೂರಲು ಮನಸ್ಸಿಲ್ಲ ಹಾಗಾಗಿ ಈ ಮಳಿಗೆ ಹಾಕಿ ವ್ಯಾಪಾರ ನಡೆಸುತ್ತಿರುವೆ. ವ್ಯಾಪಾರಕ್ಕೆ ಮಗ ಕೂಡ ಧನ ಸಹಾಯ ನೀಡಿ ಸಹಕರಿಸಿದ್ದಾನೆ. ಸಂಜೆ ವೇಳೆ ಮಗ–ಸೊಸೆ ಬಂದು ಕೈಜೋಡಿಸುವರು ಎಂದು ತಾಯಿ ಭಾನುಮತಿ(67) ಮಾತಿಗೆ ಜೊತೆಯಾದರು.

ಹೋಳಿಗೆಯನ್ನು ತವಾದ ಮೇಲೆ ಹಾಕುತ್ತಾ ಇಂದೇಕೋ ಅವಳಿಗೆ ಆರೋಗ್ಯ ಸರಿ ಇಲ್ಲ ಹಾಗಾಗಿ ನಾನು ಕೈಜೋಡಿಸಿರುವೆ ಎಂದು ಜನರು ಅದೇಕೆ ಆರೋಗ್ಯ ಕೆಡಿಸಿಕೊಳ್ಳುವ ಫಾಸ್ಟ್ ಫುಡ್ಡಿನ ಕಡೆ ಮುಖಮಾಡಿದ್ದಾರೋ ಗೊತ್ತಿಲ್ಲ. ಸಾಂಪ್ರದಾಯಿಕ ಖಾದ್ಯ ಹೋಳಿಗೆ ಆರೋಗ್ಯ ನೀಡುವುದರೊಂದಿಗೆ ದೇಹಕ್ಕೆ ಶಕ್ತಿ ನೀಡುವುದು. ಬಿಸಿಬಿಸಿಯಾಗಿ ಸ್ಥಳದಲ್ಲಿಯೇ ಮಾಡಿಕೊಡುವೆವು. ಕಾಯಿ, ಕರ್ಜೂರ, ಬೇಳೆ ಹಾಗೂ ಕ್ಯಾರಟ್ ಹೋಳಿಗೆಗಳನ್ನು ಮಾಡಲಾಗುತ್ತಿದ್ದು, ಕರ್ಜೂರ ಮತ್ತು ಕಾಯಿ ಹೋಳಿಗೆಗೆ ಡಿಮ್ಯಾಂಡ್ ಹೆಚ್ಚು. ಮಳಿಗೆಯ ಬಾಡಿಗೆ ತುಸು ದುಬಾರಿ. ಇನ್ನೂ ಅಸಲೇ ಕೈಗೆ ಬಂದಿಲ್ಲ ಮುಂದಿನ ದಿನಗಳಲ್ಲಿ ಲಾಭ ದೊರೆಯುವುದು ಎನ್ನುವ ನಿರೀಕ್ಷೆ ಇದೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಯಾರ ಹಂಗೂ ಇಲ್ಲದೆ ಬಡತನವೆಂದು ಕೊರಗದೆ ಸ್ವಾವಲಂಬಿ ಬದುಕಿನ ಮೂಲಕ ಮಕ್ಕಳ ಮೊಮ್ಮಕ್ಕಳ ಭವಿಷ್ಯದ ಭದ್ರ ಬುನಾದಿಗಾಗಿ ಪಾರಿಜಾತ ಅವರು ಟೊಂಕಕಟ್ಟಿ ನಿಂತಿದ್ದಾರೆ. ಅವರಿಗೆ ಶುಭ ಹಾರೈಸೋಣ.

– ರೇಖಾ ಪ್ರಕಾಶ್  ಕೆ. ಎಂ.

Leave a Reply

comments

Related Articles

error: