
ಕರ್ನಾಟಕಪ್ರಮುಖ ಸುದ್ದಿ
ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಶಾಸಕ ಪುಟ್ಟಣ್ಣಯ್ಯ ಸೂಚನೆ
ರಾಜ್ಯ(ಮಂಡ್ಯ)ಸೆ.4:- ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಗುಣಮಟ್ಟದಿಂದ ಅಭಿವೃದ್ದಿಪಡಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ಪಾಂಡವಪುರ ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ 1.50 ಕೋಟಿ ವೆಚ್ಚದಲ್ಲಿ ಬನ್ನಂಗಾಡಿ-ರಾಗಿಮುದ್ದನಹಳ್ಳಿಗೆ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. ಯಾವುದೇ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡರೆ ಕಾಮಗಾರಿಗಳು ಹತ್ತಾರು ವರ್ಷಗಳ ಕಾಲ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆದ್ದರಿಂದ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಸಂಬಂಧಿಸಿದ ಎಂಜಿನಿಯರ್ಗಳು ಆಗಾಗ ಕಾಮಗಾರಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ಬನ್ನಂಗಾಡಿ ಗ್ರಾಮದಿಂದ ರಾಗಿಮುದ್ದನಹಳ್ಳಿ, ಬೇಬಿ, ಡಿಂಕಾ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆಯೂ ಗುಂಡಿಬಿದ್ದು ಅದ್ವಾನಗೊಂಡಿತ್ತು. ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ನಿತ್ಯ ಹಿಡಿಶಾಪ ಹಾಕುತ್ತಿದ್ದರು. ಇದರಿಂದ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರು. ಆದ್ದರಿಂದ ಲೋಕೋಪಯೋಗಿ ಇಲಾಖೆಯ ನಬಾರ್ಡ್ ಯೋಜನೆಯಡಿ ಅಂದಾಜು 1.50 ಕೋಟಿ ವೆಚ್ಚದಲ್ಲಿ 2.20 ಉದ್ದದ ವರೆಗೆ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಉಳಿದ ರಸ್ತೆಯನ್ನು ಮತ್ತೊಂದು ಯೋಜನೆಯಡಿ ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಜಿಪಂ ಸದಸ್ಯ ಸಿ.ಅಶೋಕ್, ತಾಪಂ ಸದಸ್ಯೆ ಪೂರ್ಣಿಮಾವೆಂಕಟೇಶ್, ಮಾಜಿ ಅಧ್ಯಕ್ಷ ಹುಚ್ಚೇಗೌಡ, ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ರೇವಣ್ಣ, ಮಾಜಿ ಅಧ್ಯಕ್ಷ ಬಿ.ಕೆ.ರೇವಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)