ಕರ್ನಾಟಕಪ್ರಮುಖ ಸುದ್ದಿ

40 ಕೋಟಿ ರು. ಕಿಕ್‍ಬ್ಯಾಕ್‍ ಪ್ರಕರಣ: ಬಿಎಸ್‍ವೈಗೆ ಕ್ಲೀನ್‍ಚಿಟ್

ಬೆಂಗಳೂರು: 40 ಕೋಟಿ ರು. ಕಿಕ್‍ ಬ್ಯಾಕ್‍ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರದಂದು ವಿಚಾರಣೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಕ್ಲೀನ್‍ಚಿಟ್‍ ನೀಡಿದೆ. ಇದರಿಂದಾಗಿ ಯಡಿಯೂರಪ್ಪ ಅವರು ಎಲ್ಲ ಆರೋಪಗಳಿಂದಲೂ ಮುಕ್ತರಾಗಿದ್ದಾರೆ. ಒಂದು ವೇಳೆ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರೆ, ಯಡಿಯೂರಪ್ಪ ಅವರಿಗೆ ಕನಿಷ್ಠ 7 ವರ್ಷ ಶಿಕ್ಷೆಯಾಗುತ್ತಿತ್ತು.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಬುಧವಾರ ನ್ಯಾ. ಆರ್.ಬಿ. ಧರ್ಮಗೌಡರ್ ತೀರ್ಪು ಪ್ರಕಟಿಸಿದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲರನ್ನೂ ಖುಲಾಸೆಗೊಳಿಸಲಾಗಿದೆ. ವಕೀಲ ಸಿ.ವಿ. ನಾಗೇಶ್ ಅವರು ಯಡಿಯೂರಪ್ಪ ಪರ ವಾದ ಮಂಡಿಸಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಂದಾಲ್ ಗ್ರೂಪ್ ಸೌತ್‍ವೆಸ್ಟ್ ಮೈನಿಂಗ್ ಕಂಪನಿಗೆ ಗಣಿ ಪರವಾನಗಿ ಮಂಜೂರು ಮಾಡಿದ್ದರು. ಜಿಂದಾಲ್‍ ಕಂಪನಿಯು 2006ರ ಮಾರ್ಚ್ ನಂತರ 2011ರವರೆಗೆ ಯಡಿಯೂರಪ್ಪ ಒಡೆತನದ ಕಂಪನಿಗೆ ಮೂರು ಬಾರಿ ಹಣ ಸಂದಾಯ ಮಾಡಿದ್ದಾರೆ ಎನ್ನಲಾಗಿತ್ತು. ಆ ಹಣ ಬಳಿಕ ಪ್ರೇರಣಾ ಟ್ರಸ್ಟ್‍ಗೆ ವರ್ಗಾವಣೆಯಾಗಿತ್ತು. ಸುಪ್ರೀಂ ಕೋರ್ಟ್‍ ನಿರ್ದೇಶನದ ಮೇರೆಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಯಡಿಯೂರಪ್ಪ ಮತ್ತು ಕುಟುಂಬದ ಸದಸ್ಯರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು.

ಕಿಕ್‍ ಬ್ಯಾಕ್ ಪಡೆದ ಪ್ರಕರಣದಲ್ಲಿ ಬಿಎಸ್‍ವೈ ಪ್ರಥಮ ಆರೋಪಿಯಾಗಿದ್ದರು. ಎರಡನೇ ಆರೋಪಿ ಪುತ್ರ ವಿಜಯೇಂದ್ರ ಮತ್ತು ಹಿರಿಯ ಪುತ್ರ ಬಿ.ವೈ. ರಾಘವೇಂದ್ರ, ಮೂರನೇ ಆರೋಪಿ ಅಳಿಯ ಸೋಹನ್‍ ಕುಮಾರ್, ನಾಲ್ಕನೇ ಆರೋಪಿ ಪ್ರೇರಣಾ ಎಜುಕೇಷನ್ ಅಂಡ್ ಸೋಶಿಯಲ್ ಟ್ರಸ್ಟ್ ಮತ್ತು ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಐದನೇ ಆರೋಪಿಯಾಗಿದ್ದರು.

“ನ್ಯಾಯಕ್ಕೆ ಜಯ ಸಂದಿದೆ. ನಾನು ಅಪರಾಧಿಯಲ್ಲ ಎಂಬುದು ಸಾಬೀತಾಗಿದೆ. ಕಷ್ಟದ ಸಮಯದಲ್ಲಿ ನನ್ನೊಂದಿಗಿದ್ದ ಎಲ್ಲ ಹಿತೈಷಿ, ಸ್ನೇಹಿತರು, ಬೆಂಬಲಿಗರಿಗೆ ಧನ್ಯವಾದಗಳು” ಎಂದು ತೀರ್ಪು ಪ್ರಕಟವಾದ ನಂತರ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: