ಸುದ್ದಿ ಸಂಕ್ಷಿಪ್ತ

ಡೆಂಗ್ಯು ಮತ್ತು ಚಿಕುನ್‍ಗುನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ : ಡಾ.ಶಿವಕುಮಾರ್

ಮಡಿಕೇರಿ ಸೆ.4 : ಜಿಲ್ಲೆಯಲ್ಲಿ ಡೆಂಗ್ಯು ಮತ್ತು ಚಿಕುನ್‍ಗುನ್ಯ ರೋಗ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡಿ ಏಡೀಸ್ ಲಾರ್ವಾ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಏಡೀಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ ಸಾರ್ವಜನಿಕರಲ್ಲಿ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ. ಗ್ರಾಮಾಂತರ ಮತ್ತು ನಗರ/ಪಟ್ಟಣ ಪ್ರದೇಶಗಳಲ್ಲಿ ಪ್ರಮುಖ ಸ್ಥಳಗಳ ಪರಿಸರದಲ್ಲಿ ಸಂಗ್ರಹವಾಗುವಂತಹ ಘನತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ವಸ್ತುಗಳು, ಎಳನೀರಿನ ಚಿಪ್ಪುಗಳು, ಗಾಜಿನ ವಸ್ತುಗಳು, ಹಳೆಯ ಟೈರುಗಳು ಇತ್ಯಾದಿಗಳನ್ನು ವಾರಕ್ಕೊಮ್ಮೆ ವಿಲೇವಾರಿ ಮಾಡಿ, ಸೊಳ್ಳೆಗಳು ಉತ್ಪತ್ತಿಯಾಗದಂತೆ ಅಗತ್ಯ ಕ್ರಮವಹಿಸಲು ಮತ್ತು ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ಅಗತ್ಯ ಕ್ರಮವಹಿಸಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚಿಸಿ ಕ್ರಮವಹಿಸಲಾಗುತ್ತಿದೆ. ಡೆಂಗ್ಯು ಜ್ವರ ಪ್ರಕರಣಗಳು ಕಂಡು ಬರುವ ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಎಲ್ಲಾ ಪ್ರಾಥಮಿಕ/ ಸಮುದಾಯ ಆರೋಗ್ಯ ಕೇಂದ್ರಗಳಿಗೆ, ಜಿಲ್ಲಾ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಅಗತ್ಯ ಚಿಕಿತ್ಸೆ ನೀಡುವುದು ಹಾಗೂ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ.

ಕೊಡಗು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಡೆಂಗ್ಯು ಜ್ವರದ ಅಗತ್ಯ ಬೆಂಬಲಾತ್ಮಕ ಚಿಕಿತ್ಸೆಯ ಔಷಧಗಳನ್ನು ದಾಸ್ತಾನಿರಿಸಿಕೊಳ್ಳಲಾಗಿದೆ. ತುರ್ತು ಸಂಧರ್ಭಗಳಲ್ಲಿ ರೋಗಿಗಳ ಹೆಚ್ಚಿನ ಉನ್ನತ ಚಿಕಿತ್ಸೆಗೆ ಅನುಕೂಲವಾಗುವಂತೆ ರೆಪರಲ್ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿಲಾಗಿದೆ. ಜಿಲ್ಲೆಯಲ್ಲಿ ಮಾಸಿಕ ತಾಲ್ಲೂಕು ಮಟ್ಟದ ಪ್ರಗತಿ ಪರಿಶಿಲನಾ ಸಭೆಗಳನ್ನು ನಡೆಸುವುದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಹಿರಿಯ ಆರೋಗ್ಯ ಸಹಾಯಕರುಗಳು, ಹಿರಿಯ ಪುರುಷ ಆರೋಗ್ಯ ಸಹಾಯಕರುಗಳು, ಕಿರಿಯ ಪುರುಷ ಆರೋಗ್ಯ ಸಹಾಯಕರುಗಳ ವಿಶೇಷ ಸಭೆ, ಮುಂಗಾರು ಪ್ರಾರಂಭದ ಅವಧಿಯಿಂದಲೇ ಸಭೆ ಕರೆದು ಜಿಲ್ಲೆಯಲ್ಲಿ ಡೆಂಗ್ಯು ಜ್ವರ ಮತ್ತು ಇನ್ನಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿ, ರೋಗ ಪ್ರಕರಣಗಳು ಉಲ್ಭಣಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮವನ್ನು ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ನಿರ್ವಹಿಸಲಾಗುತ್ತಿದೆ.

ಡೆಂಗ್ಯುಜ್ವರ ಮತ್ತು ಚಿಕುಂಗುನ್ಯ ರೋಗ ಪ್ರಕರಣಗಳನ್ನು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿಯೇ  ISO ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಸೂಚನೆಯಂತೆ ಪ್ರಯೋಗಾಲಯ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ್ ಎಂ.ಅವರು ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಡೆಂಗ್ಯು ಮತ್ತು ಚಿಕುಂಗುನ್ಯ ರೋಗಗಳ ಸ್ಥಿತಿ:-2017 ರ ಜನವರಿ ಯಿಂದ ಆಗಸ್ಟ್ ಅಂತ್ಯದ ವರೆಗೆ ಕೊಡಗು ಜಿಲ್ಲೆಯಲ್ಲಿ 891 ಶಂಕಿತ ಡೆಂಗ್ಯು ಜ್ವರ ರೋಗಿಗಳಲ್ಲಿ ಒಟ್ಟು 180 ಡೆಂಗಿ ಜ್ವರ ಪ್ರಕರಣಗಳು ರಕ್ತದ ಮಾದರಿ ಪರೀಕ್ಷೆಯಿಂದ ದೃಡಫಟ್ಟಿರುತ್ತವೆ. ಇವುಗಳಲ್ಲಿ ಎಲ್ಲಾ 216 ಡೆಂಗಿ ಜ್ವರ ಪ್ರಕರಣಗಳಿಗೆ ಸೂಕ್ತ ಬೆಂಬಲಾತ್ಮಕ ಚಿಕಿತ್ಸೆ ನೀಡಲಾಗಿದೆ ಮತ್ತು ಗುಣಮುಖವಾಗಿರುತ್ತಾರೆ. ಅದೇ ರೀತಿ 124 ಶಂಕಿತ ಚಿಕುಂಗುನ್ಯ ರೋಗಿಗಳ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, ಯಾವುದೇ ಚಿಕುಂಗುನ್ಯ ಪ್ರಕರಣ ವರದಿಯಾಗಿಲ್ಲ.

ತಾಲ್ಲೂಕುವಾರು ಸಾಂಕ್ರಾಮಿಕ ರೋಗಗಳ ವರದಿ ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ ಎಚ್1 ಎನ್.1 9, ಇಲಿ ಜ್ವರ 18, ಮಲೇರಿಯಾ 1, ಡೆಂಗ್ಯೂ 64, ಕಾಮಾಲೆ–ಎ 83, ಸೋಮವಾರಪೇಟೆ ತಾಲ್ಲೂಕಿನಲ್ಲಿ ಎಚ್ 1 ಎನ್1 7, ಡೆಂಗ್ಯೂ 96, ವಿರಾಜಪೇಟೆ ತಾಲ್ಲೂಕಿನಲ್ಲಿ ಎಚ್1 ಎನ್1 3, ಡೆಂಗ್ಯೂ 56 ಮೂರು ತಾಲ್ಲೂಕಿನಲ್ಲಿ ಒಟ್ಟು ಎಚ್1 ಎನ್1 16, ಇಲಿ ಜ್ವರ 18, ಮಲೇರಿಯಾ 1, ಡೆಂಗ್ಯೂ 216 ಹಾಗೂ ಕಾಮಾಲೆ 83 ಪ್ರಕರಣಗಳು ವರದಿಯಾಗಿದೆ.

ರೋಗ ಲಕ್ಷಣಗಳು:  ಡೆಂಗ್ಯು ಜ್ವರ: ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು. ಡೆಂಗಿ ರಕ್ತಸ್ರಾವ ಜ್ವರ : ಮೇಲೆ ಹೇಳಿದ ಲಕ್ಷಣಗಳ ಜೊತೆಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು, ಕಪ್ಪು ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿಕೊಂಡ ಚರ್ಮ, ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದು. ಜ್ವರ ಬಂದ 3-5 ದಿನಗಳಲ್ಲಿ ಮೂಗು ಮತ್ತು ವಸಡಿನಲ್ಲಿ ರಕ್ತ ಸ್ರಾವದ ಚಿನ್ಹೆಗಳು ಕಂಡು ಬರುತ್ತದೆ. 5-6 ದಿನಗಳ ನಂತರವೂ ಜ್ವರ ಮುಂದುವರೆದಲ್ಲಿ ಮಧ್ಯದಲ್ಲಿ ಸ್ವಲ್ಪ ಕಡಿಮೆಯಾಗಿ ಮತ್ತೆ ಹೆಚ್ಚಾಗುತ್ತದೆ.

ಚಿಕನ್ ಗುನ್ಯ ರೋಗದ ಲಕ್ಷಣಗಳು: ಇದ್ದಕ್ಕಿದ್ದಂತೆ ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಉಂಟಾಗುವುದು.  ಚಿಕಿತ್ಸೆ: ಡೆಂಗಿ ಮತ್ತು ಚಿಕುಂಗುನ್ಯಾ ರೋಗಗಳಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿದಲ್ಲಿ ಡೆಂಗಿ ರೋಗದ ಲಕ್ಷಣಗಳನ್ನು ಪರಿಹರಿಸಿ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದು. ಡೆಂಗಿ ಜ್ವರದಲ್ಲಿ ಆಸ್ಪಿರಿನ್ ಮತ್ತು ಬ್ರೂಫಿನ್ ಮುಂತಾದ ಔಷಧಿಗಳನ್ನು ಕೊಡಬಾರದು. ಇವು ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ವೈದ್ಯರ ಸಲಹೆ ಪಡೆದು ಔಷದಿ ತೆಗೆದುಕೊಳ್ಳಬೇಕಿದೆ ಎಂದು ಡಾ.ಶಿವಕುಮಾರ್ ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: