ಮೈಸೂರು

ದಲಿತ ಹೆಣ್ಣು ಮಕ್ಕಳ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

ಮೈಸೂರು, ಸೆ.೫: ದಲಿತ ಹೆಣ್ಣು ಮಕ್ಕಳ ವಿರುದ್ಧ ರಾಜಕೀಯ ನಾಯಕರು ನೀಡುತ್ತಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಮಾನಸಗಂಗೋತ್ರಿಯ ಕ್ಲಾಕ್ ಟವರ್ ವಳಿ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿಗಳಿವೆ. ಅಲ್ಲದೆ ಭಾರತ ವಿಶ್ವದ ಬೃಹತ್ ಪ್ರಜಾಪ್ರಭುತ್ವ ದೇಶವಾಗಿದ್ದು ಅವರವರ ಧರ್ಮ ಮತ್ತು ಸಂಸ್ಕೃತಿಯನ್ನು ಬಳಸಿಕೊಳ್ಳಲು ಎಲ್ಲರಿಗೂ ಸಂವಿಧಾನಾತ್ಮಕ ಹಕ್ಕುಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಬೇರೆ ಧರ್ಮ ಮತ್ತು ಸಮಾಜದ ಹಾಗೂ ಸಂಸ್ಕೃತಿಯ ಮೇಲೆ ಬಲ ಪ್ರಯೋಗ ಮಾಡುತ್ತಿರುವುದು ಖಂಡನೀಯ. ಅಲ್ಲದೆ ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ರಾಜಕೀಯ ನಾಯಕರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿ ಕಾರಿದರು.
ರಾಜಕೀಯ ನಾಯಕರು ಜನರಿಂದ ಆಯ್ಕೆಯಾಗಿರುವುದು ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೇ ಹೊರತು ಸಮಾಜದ ಶಾಂತಿಯನ್ನು ಹಾಳು ಮಾಡಲು ಅಲ್ಲ. ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ ರಾಜಕೀಯ ಕೆಸರೆರೆಚಾರದಲ್ಲಿ ತೊಡಗಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ನಿಮಗೆ ನಿಜವಾಗಿಯೂ ಸ್ತ್ರೀಯರ ಹಾಗೂ ದಲಿತರ ಮೇಲೆ ಗೌರವ, ಕಾಳಜಿ ಇದ್ದರೆ ಮಹಿಳೆ ಹಾಗೂ ಮಕ್ಕಳ ಮೇಲಾಗುತ್ತಿರುವ ದೌರ್ಜನೆ ತಡೆಗಟ್ಟಿ. ಹಕ್ಕು ಮತ್ತು ಸಮಾನತೆಗಾಗಿ ಹೋರಾಡಿ ಅದನ್ನು ಬಿಟ್ಟು ಇದೇ ರೀತಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಿ.ಮೂರ್ತಿ, ಕಾರ್ಯದರ್ಶಿ ನವೀನ್ ಮೌರ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: