ಕರ್ನಾಟಕಪ್ರಮುಖ ಸುದ್ದಿ

ಸಂಪುಟ ಸಭೆ ನಿರ್ಣಯಗಳು : ಕರಾವಳಿ ಮರಳು ನೀತಿ, ಮೆಟ್ರೊಗೆ 6 ಸಾವಿರ ಕೋಟಿ, ಕೋಲಾರದಲ್ಲಿ ವಸತಿ ಸಮುಚ್ಚಯ

ಬೆಂಗಳೂರು, ಸೆ.5 (ಪ್ರಮುಖ ಸುದ್ದಿ) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾದ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೆಲವು ಪ್ರಮುಖ ನಿರ್ಧಾರಗಳು ಇಂತಿವೆ.

ಮುಖ್ಯಮಂತ್ರಿಯವರ ಮೂಲಸೌಕರ್ಯ ಯೋಜನೆ :

ಪ್ರಸಕ್ತ ಸಾಲಿನ ಆಯವ್ಯಯಲ್ಲಿ ಪ್ರಕಟಿಸಿದಂತೆ ಮುಖ್ಯಮಂತ್ರಿಯವರ ಮೂಲಸೌಕರ್ಯ ನೀರುಗಾಲುವೆ ಕಾಮಗಾರಿಗಳು ಹಾಗೂ ತುರ್ತು ಕಾಮಗಾರಿಗಳಿಗೆ ಸಂಪುಟವು ಅನುಮೋದನೆ ನೀಡಿದೆ. ಈ ಯೋಜನೆಯಡಿ ಬೆಂಗಳೂರು ಮಹಾ ನಗರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿರುವ 842 ಕಿ ಮೀ ಪ್ರದೇಶದಲ್ಲಿ ಕಾಮಗಾರಿಗಳ ಅನುಷ್ಠಾನಕ್ಕೆ 300 ಕೋಟಿ ರೂ ಗಳಿಗೆ  ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ :

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳನ್ನು ಸಂಪುಟ ಅಂಗೀಕರಿಸಿದೆ.

ಕರಾವಳಿಯಲ್ಲಿ ಕರಾವಳಿ ನಿಯಂತ್ರಣಾ ವಲಯ ಹಾಗೂ ಕರಾವಳಿ ನಿಯಂತ್ರಣೇತರ ವಲಯದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಬಗ್ಗೆ ಸಂಪುಟವು ಪರಾಮರ್ಶಿಸಿ ಕರಾವಳಿ ನಿಯಂತ್ರಣೇತರ ವಲಯದಲ್ಲಿ ಸಾಂಪ್ರದಾಯಕ ಮರಳು ಗಣಿಗಾರಿಕೆಗೆ ಅನುಮತಿ ನೀಡಿದೆ. ಈ ಪ್ರದೇಶದಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆಗೆ ನಿಷೇಧ ಹೇರಲು ಹಾಗೂ ಕರಾವಳಿ ನಿಯಂತ್ರಣೇತರ ವಲಯದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಅಧಿಕಾರವನ್ನು ತಹಸೀಲ್ದಾರ್ ಅವರಿಗೆ ನೀಡಲು ಸಂಪುಟ ನಿರ್ಧರಿಸಿದೆ.

ನಮ್ಮ ಮೆಟ್ರೋ ಎರಡನೇ ಹಂತ ಭೂಸ್ವಾಧೀನಕ್ಕೆ 6293 ಕೋಟಿ ರೂ ಮಂಜೂರು :

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ನಮ್ಮ ಮೆಟ್ರೋ ಎರಡನೇ ಹಂತ  ಯೋಜನೆಯ ಭೂಸ್ವಾಧೀನಕ್ಕೆ ಹೆಚ್ಚುವರಿಯಾಗಿ 2187.46 ಕೋಟಿ ಸೇರಿದಂತೆ ಒಟ್ಟಾರೆ 6293 ಕೋಟಿ ರೂ ಮೊತ್ತಕ್ಕೆ ಸಂಪುಟ ಮಂಜೂರಾತಿ ನೀಡಿದೆ.

ಕಬ್ಬಿಣಾಂಶ ಮಾತ್ರೆ ಖರೀದಿಗೆ 10.4 ಕೋಟಿ ರೂ, ಸ್ಯಾನಿಟರಿ ನ್ಯಾಪ್ಕಿನ್ಗೆ 47.96 ಕೋಟಿ ರೂ  :

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಯೋಜನೆ ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ ಕಾರ್ಯಕ್ರಮಗಳಡಿ ಕಬ್ಬಿಣಾಂಶವುಳ್ಳ ಮಾತ್ರೆಗಳನ್ನು 10.4 ಕೋಟಿ ರೂ ವೆಚ್ಚದಲ್ಲಿ ಹಾಗೂ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು 47.96  ಕೋಟಿ ರೂ ವೆಚ್ಚದಲ್ಲಿ ಖರೀದಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬಳಕೆಯಾಗದ ಕಾನೂನುಗಳ ನಿರಶನ :

ಕಳೆದ ಹಲವಾರು ವರ್ಷಗಳಿಂದ ಬಳಕೆಯಾಗದ ರಾಜ್ಯದ 135 ಕಾನೂನುಗಳು ಹಾಗೂ ಕೇಂದ್ರ ಸರ್ಕಾರದ ಎಂಟು ಕಾನೂನುಗಳನ್ನು ನಿರಸನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.  ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ 13.25 ಕೋಟಿ ರೂ ವೆಚ್ಚದಲ್ಲಿ ಡಾ ಬಿ. ಆರ್. ಅಂಬೇಡ್ಕರ್ ಭವನದ ಪರಿಷ್ಕೃತ ಅಂದಾಜಿಗೆ ಸಂಪುಟವು ಅನುಮೋದನೆ ನೀಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹೇಮಾವತಿ ವಸಾಹತು ಜಕ್ಕನಹಳ್ಳಿಯಲ್ಲಿರುವ 5.16 ಎಕರೆ ಜಾಗವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಾರ್ಗಸೂಚಿ ದರದಲ್ಲಿ ಹಸ್ತಾಂತರಿಸಲು ಸಂಪುಟ ಒಪ್ಪಿಗೆ ನೀಡಿದೆ.

ವಸತಿ ಸಮುಚ್ಛಯ ನಿರ್ಮಾಣಕ್ಕೆ ಅನುಮೋದನೆ :

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬೋವಿನಾಚನಪಲ್ಲಿ ಮತ್ತು ಪೆದ್ದನಾಚನಪಲ್ಲಿ ಗ್ರಾಮಗಳಲ್ಲಿ 6.88 ಕೋಟಿ ರೂ ವೆಚ್ಚದಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ವಸತಿ ಸಮುಚ್ಛಯವನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಅದೇ ರೀತಿ, ಕೋರಮಂಗಲದಿಂದ ಶಿನಿವಾಗಿಲುವರೆಗೆ ತ್ಯಾಜ್ಯ ನೀರು ಶುದ್ಧೀಕರಿಸಿ, ಶುದ್ಧೀಕರಿಸಿದ ನೀರನ್ನು ಬೆಳ್ಳಂದೂರು ಕೆರೆಗೆ ಹರಿಸುವ 12 ಕೋಟಿ ವೆಚ್ಚದ ಮೂರು ವರ್ಷಗಳ  ಕ್ರಿಯಾ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

ಸಂಪುಟಸಭೆಯ ನಿರ್ಣಯಗಳನ್ನು ಸುದ್ದಿಗಾರರಿಗೆ ವಿವರಿಸಿದ ಸಚಿವ ಜಯಚಂದ್ರ ಅವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಕುರಿತ ರಾಜ್ಯ ಸಚಿವ ಸಂಪುಟದ ಶಿಫಾರಸ್ಸಿನ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯಪಾಲರು ಸುಗ್ರೀವಾಜ್ಞೆಗೆ ಶೀಘ್ರದಲ್ಲೇ ಅಂಕಿತ ಹಾಕುವ ವಿಶ್ವಾಸವಿದೆ. ರಾಜ್ಯ ಸರ್ಕಾರ ಈಗಾಗಲೇ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾಲಾವಧಿ ವಿಸ್ತರಣಾ ಹಾಗೂ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದರು.

-ಎನ್.ಬಿ.

Leave a Reply

comments

Related Articles

error: