ಮೈಸೂರು

ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಂತೆ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು : ಪ್ರೊ. ಕೆ. ರಾಮಮೂರ್ತಿರಾವ್

ಮೈಸೂರು,ಸೆ.5:-  ನಟರಾಜ ಪ್ರತಿಷ್ಠಾನದಿಂದ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮಂಗಳವಾರ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ನಂಜನಗೂಡು ಜೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ರಾಮಮೂರ್ತಿರಾವ್, ಮಾತನಾಡಿ ಇದೊಂದು ವಿಶೇಷವಾದ ಸಂದರ್ಭ ದೇಶದೆಲ್ಲೆಡೆ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಒಬ್ಬ ವ್ಯಕ್ತಿ ಪರಿಪೂರ್ಣ ವ್ಯಕ್ತಿಯಾಗಲು ಗುರು ಮುಖ್ಯ. ಗುರುವಾದವನು ಮಕ್ಕಳನ್ನು ರೂಪಿಸುತ್ತಾನೆ. ಇಡೀ ದೇಶ ಒಂದು ಆರೋಗ್ಯಪೂರ್ಣ, ಸದೃಢ ದೇಶವಾಗಬೇಕಾದರೆ ಗುರು ಮುಖ್ಯ. ಲಾಲ್ ಬಹದ್ದೂರ್ ಶಾಸ್ತ್ರೀಯವರು, ಜೈ ಜವಾನ್ ಜೈ ಕಿಸಾನ್ ಎಂದಿದ್ದಾರೆ. ಯೋಧ ಮತ್ತು ರೈತ ಇಬ್ಬರು ದೇಶದ ಬೆನ್ನುಲುಬಾಗಿದ್ದಾರೆ ಎಂದಿದ್ದಾರೆ. ಇದಕ್ಕೆ ಜೈ ಗುರು ಎಂದು ಸೇರಿಸಬೇಕಾಗುತ್ತದೆ ಏಕೆಂದರೆ ಪ್ರಪಂಚದ ಅಜ್ಞಾನವೆಂಬ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿಯೇ ಗುರು. ಶಿಕ್ಷಣವೆಂದರೆ ಕೇವಲ ಪುಸ್ತಕದಲ್ಲಿರುವ ವಿಷಯವನ್ನು ಬೋಧಿಸುವುದು ಮಾತ್ರ ಶಿಕ್ಷಣ ವೃತ್ತಿಯಲ್ಲ, ಬದಲಿಗೆ ಜೀವನ ಶಿಕ್ಷಣವನ್ನು ಮತ್ತು ಮೌಲ್ಯ ಶಿಕ್ಷಣವನ್ನು ಕಲಿಸುವುದೇ ನಿಜವಾದ ಶಿಕ್ಷಣ. ಇದನ್ನು ಗುರುವಾದವನು ತಿಳಿಯಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ತಿಳಿದು ಪ್ರೀತಿಸಬೇಕು. ಒಬ್ಬ ನಿಜವಾದ ಶಿಕ್ಷಕ ಕೃಷಿಕನಿದ್ದಂತೆ, ವಿದ್ಯಾರ್ಥಿ ಎಂಬ ಕೃಷಿ ಭೂಮಿಯಲ್ಲಿ ಒಳ್ಳೆಯ ಬೀಜಗಳನ್ನು ಬಿತ್ತಿ ಉತ್ತಮ ಬೆಳೆಯನ್ನು ತೆಗೆಯುವಂತೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ, ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ನಂಜುಂಡಯ್ಯ ಮಾತನಾಡಿ  ನಟರಾಜ ವಿದ್ಯಾ ಸಂಸ್ಥೆಯು ಪ್ರತಿ ವರ್ಷವು ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರಲ್ಲದೇ, ಶ್ರೀಗಳವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವವಾದುದು. ನಿಜವಾದ ವಿದ್ಯಾರ್ಥಿ ಎಂದರೆ ಒಬ್ಬ ಉತ್ತಮ ಶಿಕ್ಷಕ. ಪ್ರೀತಿ ವಿಶ್ವಾಸದಿಂದ ಮಕ್ಕಳಿಗೆ ವಿಷಯದಲ್ಲಿ ಆಸಕ್ತಿಯನ್ನು ಮೂಡಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲಬೇಕೆಂದು ನುಡಿದರು. ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ  ಇತಿಹಾಸ ವಿಭಾಗದ ಮುಖ್ಯಸ್ಥೆ ತ್ರಿವೇಣಿ, ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರಾಣಿ ಕೆ.ಎನ್, ಮಹಿಳಾ ಪದವಿ ಪೂರ್ವ ಕಾಲೇಜು ಕನ್ನಡ ವಿಭಾಗದ ರಾಧಾ ಬಿ, ನಟರಾಜ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಸತ್ಯ ಸುಲೋಚನ ಮತ್ತಿತರರು ಉಪಸ್ಥಿತರಿದ್ದರು. (ಎಸ್,ಎಚ್)

Leave a Reply

comments

Related Articles

error: