Uncategorized

ವಿದ್ಯಾರ್ಥಿಗಳು ತಮ್ಮ ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು: ಡಾ. ಸಿ.ಜಿ.ಬೆಟಸೂರಮಠ

ಮೈಸೂರು,ಸೆ.5:- ಮೈಸೂರು ನಗರದ ಊಟಿರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಸ್ಚಚ್ಛ ಭಾರತ ಅಭಿಯಾನದ ಅಂಗವಾಗಿ ಸ್ಚಚ್ಛತಾ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ  ಡಾ. ಸಿ.ಜಿ.ಬೆಟಸೂರಮಠ ಸ್ವಚ್ಛತೆ ಕುರಿತು ಮಾತನಾಡಿದರು. ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಸ್ವಚ್ಛತೆಯ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛತಾ ಅಭಿಯಾನ ಸಫಲವಾಗಬೇಕಾದರೆ ಅದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ದೊಡ್ಡದು. ವಿದ್ಯಾರ್ಥಿಗಳು ತಮ್ಮ ಮನೆ ಮತ್ತು ಸುತ್ತಲ ಪರಿಸರದ ಜೊತೆಗೆ ಕಾಲೇಜಿನ ಆವರಣವನ್ನು, ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಾಲೇಜು ಉತ್ತಮ ಹಾಗೂ ಆರೋಗ್ಯಪೂರ್ಣ ಪರಿಸರ ಹೊಂದಲು ‘ಕ್ಲೀನ್ ಕ್ಯಾಂಪಸ್, ಗ್ರೀನ್ ಕ್ಯಾಂಪಸ್, ಸ್ಮಾರ್ಟ್ ಕ್ಯಾಂಪಸ್’ ಎಂಬುದನ್ನು ಧ್ಯೇಯ ವಾಕ್ಯವಾಗಿ ಸ್ವೀಕರಿಸಿ ಅದನ್ನು ಸಾಕಾರಗೊಳಿಸಲು ಮನಃಪೂರ್ವಕವಾಗಿ ಪ್ರಯತ್ನಿಸಬೇಕು ಎಂದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ವಿದ್ಯಾಸಂಸ್ಥೆಗಳು ಉತ್ತಮ ಪರಿಸರವನ್ನು ಹೊಂದಲು ಸ್ವಚ್ಛತೆ, ನೀರು, ವಿದ್ಯುಚ್ಛಕ್ತಿ, ಆಹಾರದ ಉಳಿತಾಯ ಮತ್ತು ಆಹಾರ ಪೋಲಾಗದಂತೆ ನಿಯಂತ್ರಿಸುವುದು ಹಾಗೂ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಈ ವಿಷಯಗಳನ್ನು ಮುಖ್ಯವಾಗಿ ಪರಿಗಣಿಸಬೇಕು ಎಂದು ತಿಳಿಸಿದರು. ಇದನ್ನು ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪಾಲಿಸಬೇಕು ಎಂದು ಕರೆ  ನೀಡಿದರು..

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಪವರ್ ಪಾಯಿಂಟ್ ಪ್ರಾತ್ಯಕ್ಷಿಕೆಯ ಮೂಲಕ ಹಲವು ವಿಷಯಗಳನ್ನು ವಿವರಿಸಿ ಅರಿವು ಮೂಡಿಸಿದರು.  900 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ  ಪ್ರತಿಜ್ಞಾವಿಧಿಯನ್ನು  ಬೋಧಿಸಿದರು.

ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ  ಪ್ರೊ. ಬಿ.ವಿ.ಸಾಂಬಶಿವಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಸೋಮಶೇಖರ್‍, ಕನ್ನಡ ಉಪನ್ಯಾಸಕ ಟಿ. ಗುರುಪಾದಸ್ವಾಮಿ, ಭೂಗೋಳಶಾಸ್ತ್ರ ಉಪನ್ಯಾಸಕ ಎಂ ಶಿವಕುಮಾರ್, ಕನ್ನಡ ಉಪನ್ಯಾಸಕ ಪಿ ಎಸ್ ಮಂಜುನಾಥ್  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: