ಮೈಸೂರು

ಬರಿಗೈನಿಂದಲೇ ಒಳಚರಂಡಿ ಸ್ವಚ್ಛಗೊಳಿಸಿದ ಪೌರಕಾರ್ಮಿಕ : ಅಮಾನವೀಯತೆಗೆ ಜ್ವಲಂತ ನಿದರ್ಶನ

ಮೈಸೂರು,ಸೆ.6:- ಮೈಸೂರಿಗೆ ಈ ಬಾರಿ   ಸ್ವಚ್ಛ ನಗರಿಯ ಗರಿ ಕೈ ತಪ್ಪಿದೆ. ಆ ಹಿನ್ನೆಯಲ್ಲಿ ಇನ್ನಷ್ಟು ಮುತುವರ್ಜಿ ವಹಿಸಿ ನಗರ ಸ್ವಚ್ಛತೆ, ಪೌರಕಾರ್ಮಿಕರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ತಿಳಿದುಕೊಂಡರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ  ಯಾವುದೇ ಭದ್ರತೆಯ ವ್ಯವಸ್ಥೆ ಕಲ್ಪಿಸದೆ ಒಳಚರಂಡಿಯನ್ನು ಬರಿಗೈನಿಂದಲೇ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಲೇ ಇದೆ. ಇದು  ಅಮಾನವೀಯತೆಯ ಜ್ವಲಂತ ನಿದರ್ಶನವಾಗಿದ್ದು, ಸಾಂಸ್ಕೃತಿಕ ನಗರಿಯ ಜನತೆಯನ್ನು ತಲೆ ತಗ್ಗಿಸುವಂತೆ ಮಾಡಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಒಳಚರಂಡಿ ಕಟ್ಟಿಕೊಂಡಿತ್ತು, ಪೌರಕಾರ್ಮಿಕ ಶ್ರೀನಿವಾಸ್ ಅವರನ್ನು ಸ್ವಚ್ಛಗೊಳಿಸುವಂತೆ ಕಳುಹಿಸಲಾಗಿದೆ. ಆದರೆ ಅವರು ಕೈಗೆ ಗ್ಲೌಸ್ ಏನನ್ನೂ ಬಳಸದೇ ಬರಿಗೈನಿಂದಲೇ ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿರುವುದು ಕಂಡು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಪೋರೇಶನ್ ಇನ್ಸಪೆಕ್ಟರ್ ಶಿವಕುಮಾರ್ ಎಂಬವರು ಒಳಚರಂಡಿ ಸ್ವಚ್ಛಗೊಳಿಸಲು ಹೇಳಿದ್ದು, ಶ್ರೀನಿವಾಸ್ ಅವರಿಗೆ ಪಾಲಿಕೆಯ ವತಿಯಿಂದ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಕಾಳಜಿ ವಹಿಸುವಂಥಹ ಸಾಮಗ್ರಿಗಳನ್ನು ನೀಡಿಲ್ಲ. ಅವರೂ ಎಲ್ಲರಂತೆ ಮನುಷ್ಯರು. ಮಾನವೀಯ ನೆಲೆಯಲ್ಲಾದರೂ ಅವರಿಗೆ ಕೈಗೆ ಧರಿಸಲು ಗ್ಲೌಸ್ ಗಳನ್ನು ನೀಡಬಹುದಾಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ.

ಈ ಹಿಂದೆ ಚಾಮುಂಡಿ ಬೆಟ್ಟದ ಗ್ರಾಮಪಂಚಾಯತ್ ವ್ಯಾಪ್ತಿಗೆ ಸೇರಿದ ಮ್ಯಾನ್ ಹೋಲ್ ನಲ್ಲಿ ಪೌರಕಾರ್ಮಿಕನೋರ್ವನನ್ನು ಇಳಿಸಿ ಸ್ವಚ್ಛಗೊಳಿಸಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಪಾಲಿಕೆಯ ವ್ಯಾಪ್ತಿಯಲ್ಲಿಯೇ ಇಂಥಹ ಅಮಾನವೀಯ ಘಟನೆ ನಡೆದಿರುವುದು ವಿಪರ್ಯಾಸ. ಪಾಲಿಕೆಯಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಮಶಿನ್ ಗಳಿದ್ದರೂ ಅವುಗಳನ್ನು ಬಳಸದೇ ಈ ರೀತಿ ಬರಿಗೈನಲ್ಲಿ ಸ್ವಚ್ಛಗೊಳಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: