ಕರ್ನಾಟಕ

ಪ್ರತಿಯೊಬ್ಬ ವ್ಯಕ್ತಿಯ ವಿಕಾಸಕ್ಕೆ ಓರ್ವ ಗುರು ಮತ್ತು ಗುರಿ ಇರಲೇಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಸೆ.6 : ಪ್ರತಿಯೊಬ್ಬ ವ್ಯಕ್ತಿಯ ವಿಕಾಸಕ್ಕೆ ಓರ್ವ ಗುರು ಮತ್ತು ಗುರಿ ಇರಲೇಬೇಕು. ಗುರಿಯಿಲ್ಲದಿದ್ದರೂ ಗುರಿತೋರಿಸುವ ಗುರು ಇರಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಜಿಲ್ಲಾ ಆಡಳಿತ ಮಂಗಳವಾರ (ಸೆ.5) ಸರ್ವಪಲ್ಲಿ ಡಾ ರಾಧಾಕೃಷ್ಣ್ ಅವರ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡುತ್ತಾ, ಶಿಕ್ಷಕರ ವೃತ್ತಿ ಪವಿತ್ರ ವೃತ್ತಿಯಾಗಿದ್ದು, ತಂದೆ ತಾಯಿಯ ನಂತರ ಪೂಜನೀಯ ಸ್ಥಾನವನ್ನು ಶಿಕ್ಷಕರಿಗೆ ನೀಡಲಾಗಿದೆ ಎಂದರು.

ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಸಹಬಾಳ್ವೆ, ಭ್ರಾತೃತ್ವ ಇರಲೇಬೇಕು. ಈ ಅವಕಾಶಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ದೊರಕಬೇಕು. ಇಂತಹ ವ್ಯಕ್ತಿತ್ವ ರೂಪಿಸುವ ಶಕ್ತಿ ಪ್ರತಿಯೊಬ್ಬ ಶಿಕ್ಷಕರಲ್ಲಿ ಇರಬೇಕು ಎಂದು ತಿಳಿಸಿದರು.

ಸನ್ನಡತೆಯುಳ್ಳಂತಹ ಯುವ ಜನಾಂಗವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದ ಅವರು, ಬದುಕಿಗೆ ಸ್ಪಂದಿಸುವಂತಹ ಶಿಕ್ಷಣ ಇಂದು ಅತ್ಯಂತ ಅವಶ್ಯಕ. ಇಂತಹ ಶಿಕ್ಷಣ ನೀಡುವ ಶಿಕ್ಷಕರು ನೀವಾಗಬೇಕು. ಎಲ್ಲರಿಗೂ ಪ್ರೇರಣೆಯಾಗುವಂತಹ ಶಿಕ್ಷಕರು ನೀವಾಗಬೇಕು ಎಂದು ಮುಖ್ಯಮಂತ್ರಿಗಳು ಶಿಕ್ಷಕರಿಗೆ ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದಾರೆ. ಆದರೆ ದುರಾದೃಷ್ಟವಶಾತ್ ಇಂದಿಗೂ ಸಹ ಪೋಷಕರಲ್ಲಿ ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಶಾಲೆಗಳಿಗೆ ಸೇರಿಸುವ ವ್ಯಾಮೋಹ ಹೆಚ್ಚುತ್ತಿದೆ.   ಇಂಗ್ಲೀಷ್‍ ಅನ್ನು ಒಂದು ಭಾಷೆಯನ್ನಾಗಿ ಕಲಿಯಬೇಕು. ಆದರೆ ಶಾಲೆಗಳಲ್ಲಿ ಕನ್ನಡ ಭಾಷೆ ಮಾಧ್ಯಮವಾಗಬೇಕು. ಪರಿಸ್ಥಿತಿ ಹೀಗಿದ್ದರೂ ಸಹ 48 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, 12 ಲಕ್ಷ ಮಕ್ಕಳು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವುದು ಸಮಾಧಾನಕರವಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರವು ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಹಾಲು-ಮೊಟ್ಟೆ ಹಾಗೂ ಸೈಕಲ್ ಇತ್ಯಾದಿಗಳನ್ನು ನೀಡಲಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಭಾವನೆ ಪೋಷಕರಲ್ಲಿ ಮೂಡಬೇಕು ಜೊತೆಗೆ ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಬೇಕು ಆಗ ಮಾತ್ರ ಶಿಕ್ಷಣಕ್ಕೆ ಸಂಪೂರ್ಣ ಅರ್ಥ ದೊರೆತಂತಾಗುತ್ತದೆ ಎಂದರು.

ಶಿಕ್ಷಕ, ಶಿಕ್ಷಕರಾಗಿ ಮಾತ್ರವಲ್ಲ ವಿದ್ಯಾರ್ಥಿಯೂ ಆದಾಗ  ಮಾತ್ರ ಶಿಕ್ಷಕರಲ್ಲಿ ಅಧ್ಯಯನಶೀಲತೆ ನಿರಂತರವಾಗಿರುತ್ತದೆ ಎಂದರು.

ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಗುರುಚೇತನ ಕಾರ್ಯಕ್ರಮ ಇಂದಿನಿಂದ ಜಾರಿಗೊಳ್ಳಲಿದ್ದು, ಈ ಕಾರ್ಯಕ್ರಮದಡಿ 50 ಸಾವಿರ ಶಿಕ್ಷಕರಿಗೆ 10 ದಿನಗಳ ತರಬೇತಿಯನ್ನು ನೀಡಲಾಗುವುದು ಎಂದ ಅವರು ಈ ಕಾರ್ಯಕ್ರಮದಡಿ ಶಿಕ್ಷಕರು ತಮ್ಮ ಆಸಕ್ತಿದಾಯಕ ವಿಷಯವನ್ನು ಆಯ್ಕೆ ಮಾಡಿಕೊಂಡು ತರಬೇತಿ ಪಡೆಯುವ ಮೂಲಕ ಜ್ಞಾನವಿಕಾಸ ಹೊಂದಬಹುದಾಗಿದ್ದು, ತನ್ಮೂಲಕ ಮಕ್ಕಳ ವಿಕಾಸಕ್ಕೆ ಅಣಿಯಾಗಬಹುದಾಗಿದೆ ಎಂದರು. 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸೆಕ್ಯುರ್ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಶಾಲಾ-ಕಾಲೇಜುಗಳ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲಾಗುತ್ತಿದೆ ಎಂದ ಅವರು, ಶಿಕ್ಷಣ ಇಲಾಖೆಗೆ ಹೊಸ ಕಾಯಕಲ್ಪ ನೀಡುವ ಕೆಲಸವೂ ಸಹ ಆರಂಭವಾಗಿದೆ ಎಂದರು.  

ಈಗಾಗಲೇ 7905 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪೂರ್ಣಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ 10 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು. ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರುಗಳ ಶಾಲೆಗಳಿಗೆ 2.50 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಈ ಮೊತ್ತವನ್ನು ಶಾಲಾಭಿವೃದ್ಧಿಗೆ ವಿನಿಯೋಗಿಸಬಹುದಾಗಿದೆ ಎಂದರು. ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳನ್ನು ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗುರುಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಲಾಂಛನ ಹಾಗೂ ತರಬೇತಿ ಸಾಹಿತ್ಯವನ್ನು ಬಿಡುಗಡೆ ಮಾಡಿದರು. ಈ ಸಂದರ್ಭ ಗಣನೀಯ ಸೇವೆ ಸಲ್ಲಿಸಿದ ಉತ್ತಮ ಶಿಕ್ಷಕರಿಗೆ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.   

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಲ್ಮನೆ ಸದಸ್ಯರಾದ ರಾಮಚಂದ್ರಗೌಡ, ಶರವಣ, ಪುಟ್ಟಣ, ಶರಣಪ್ಪ ಮಟ್ಟೂರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್, ಸಾ.ಶಿ.ಇ. ಆಯುಕ್ತರಾದ ಶ್ರೀಮತಿ ಸೌಜನ್ಯ, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶ್ರೀಮತಿ ಶಿಖಾ, ಜಿಲ್ಲಾಧಿಕಾರಿ ವಿ. ಶಂಕರ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

-ಎನ್.ಬಿ.

Leave a Reply

comments

Related Articles

error: