ಮೈಸೂರು

ನೀಲಗಾರ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ: ಪಿ.ಕೆ.ರಾಜಶೇಖರ್

ನೀಲಗಾರ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಕಲಾವಿದರನ್ನು ಗುರುತಿಸಿ ಸರಕಾರ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ, ಕಲಾವಿದರನ್ನೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್ ಅಭಿಪ್ರಾಯಪಟ್ಟರು.

ಬುಧವಾರ ಮಂಟೇಸ್ವಾಮಿ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಮಂಟೇಸ್ವಾಮಿ ನೀಲಗಾರರ ಹಾಗೂ ಸಿದ್ದಪ್ಪಾಜಿ ದೇವಸ್ಥಾನದ ಹಕ್ಕು ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಿಂಗಾಪುರ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಜಿ.ಗುರುರಾಜು ಹಾಗೂ ತಂಡದವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಕಲಾವಿದರನ್ನು ಸನ್ಮಾನಿಸಿ ಬಳಿಕ ಮಾತನಾಡಿದ ಅವರು, ನೀಲಗಾರ ಪರಂಪರೆಯನ್ನು ಮೊದಲು ಹುಟ್ಟಿಹಾಕಿದ್ದು ಮಂಟೇಸ್ವಾಮಿ. ಇಂದು ಈ ನೀಲಗಾರರ ಪರಂಪರೆ ಆಧುನಿಕ ಜೀವನದ ಭರಾಟೆಗೆ ಸಿಲುಕಿ ನಶಿಸಿ ಹೋಗುವ ಹಂತ ತಲುಪಿದೆ. ಸರ್ಕಾರ ಎಳ್ಳಷ್ಟು ಸಾಧನೆ ಮಾಡದ ಅನರ್ಹರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಬದಲು, ಈ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ನೀಡಿ ಮತ್ತಷ್ಟು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಮಂಟೇಸ್ವಾಮಿ ಅವರು ಲೋಕಸಾಧಕರು. ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ದಲಿತರಾದ ಚೆನ್ನಯ್ಯ, ಲಿಂಗಯ್ಯ ಅವರನ್ನು ಕುರುಬನ ಕಟ್ಟೆಗೆ ಕರೆತಂದು ಕಂಡಾಯ(ದೇವರ ಉತ್ಸವ ಮೂರ್ತಿ) ಹೊರಿಸಿದರು. ಕತ್ತಲ ರಾಜ್ಯಕ್ಕೆ ಬಂದು ಬೆಳಕು ನೀಡಿದವರು. ಜಾನಪದ ಸಾಹಿತ್ಯದ ಮೂಲಕ ನಮ್ಮ ಪರಂಪರೆಯನ್ನು ಬಿಂಬಿಸುವ ಹಾಡುಗಳನ್ನು ಹಾಡಿ ಈ ನೆಲದ ಬಹುಸಂಸ್ಕೃತಿಯನ್ನು ಎತ್ತಿ ಹಿಡಿದವರು. ಅಂದೇ ಹಿಂದೂ-ಮುಸಲ್ಮಾನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಹಾಗಾಗಿ ನೀಲಗಾರರು ಹೆಸರಿಲ್ಲದ ಹಸಿರು ಕಾವ್ಯಗಾರರಾಗಿದ್ದು, ನೀಲಗಾರ ಪರಂಪರೆ ಎಲ್ಲ ಪಂಥಗಳನ್ನು ಮೀರಿದ್ದು ಎಂದು ಹೇಳಿದರು.

ಬಳಿಕ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ಜಗತ್ತಿನ ಎಲ್ಲ ಶಿಷ್ಠ ಕಾರ್ಯಗಳಿಗೂ ತಾಯಿ ಬೇರು ಜಾನಪದ. ಇಂತಹ ಜಾನಪದವನ್ನು ಹಾಡುಗಳ ಮೂಲಕ ಚಿರಸ್ಥಾಯಿಗೊಳಿಸುತ್ತಿರುವವರು ನೀಲಗಾರರು ಹಾಗೂ ತಂಬೂರಿ ಕಲಾವಿದರು. ಇಂತಹವರ ಪೈಕಿ ಜಿ.ಗುರುರಾಜು ಹಾಗೂ ತಂಡದವರು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಸರ್ಕಾರ ಇವರನ್ನು ತಡವಾಗಿಯಾದರೂ ಗುರುತಿಸಿ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಇಂತಹ ಇನ್ನಷ್ಟು ಕಾರ್ಯಗಳು ನೀಲಗಾರ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಗತವಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಂಗಾಪುರ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಕಲಾವಿದರನ್ನು ಅಭಿನಂದಿಸಲಾಯಿತು. ಸಮಾಜ ಸೇವಕ ನೂರ್ ಅಹಮದ್ ಮರ್ಚೆಂಟ್, ಸಮಿತಿಯ ಅಧ್ಯಕ್ಷ ಸಿದ್ಧಾರ್ಥ, ಉಪಾಧ್ಯಕ್ಷ ಶಿವಕುಮಾರ್, ಖಜಾಂಚಿ ಸಿದ್ದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: