ಪ್ರಮುಖ ಸುದ್ದಿ

ಗೌರಿ ಲಂಕೇಶ್ ಹತ್ಯೆಗೆ ಕಾರ್ಯನಿರತ ಪತ್ರಕರ್ತರ ಖಂಡನೆ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಸೆ.೬: ಲಂಕೇಶ್ ಪತ್ರಿಕೆಯ ಸಂಪಾದಕಿ ಹಾಗೂ ಮಹಿಳಾ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ, ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು ಒತ್ತಾಯಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರು ಉಪತಹಸೀಲ್ದಾರ್ ಕಮಲಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಷ್ಟ್ರ ಪ್ರಖ್ಯಾತಿ ಪಡೆದಿರುವ ಪತ್ರಕರ್ತೆ ಹಾಗೂ ಲೇಖಕಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಪತ್ರಕರ್ತರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿನ ಅಕ್ರಮಗಳನ್ನು ಬಯಲಿಗೆ ಎಳೆಯುವ ಅನೇಕ ಸಂದರ್ಭಗಳಲ್ಲಿ ಸುದ್ದಿ ಮಾಡುವಾಗ ಅನೇಕರು ಬೆದರಿಕೆ ಹಾಕುವುದು ಸಹಜವಾಗಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಪುನಾವರ್ತನೆಯಾಗುತ್ತಿದ್ದು ವಿಪರ್ಯಾಸವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ಗೌರಿಲಂಕೇಶ್‌ರನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನಿನ ಚೌಕಟ್ಟಿನಲ್ಲಿ ಇಂತಹವರಿಗೆ ಉಗ್ರಶಿಕ್ಷೆ ಕೊಡಿಸಬೇಕು. ಎಲ್ಲಾ ಪತ್ರಕರ್ತರು ನಿರ್ಭಯವಾಗಿ ಸುದ್ದಿ ಮಾಡಲು  ಸೂಕ್ತ ರಕ್ಷಣೆ ನೀಡಬೇಕು ಎಂದು ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮುಖಾಂತರ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು, ಪತ್ರಕರ್ತರಾದ ಜಿ.ಸೋಮಶೇಖರ್, ಕೆ.ಎನ್.ಮಹದೇವಸ್ವಾಮಿ, ವೀರೇಂದ್ರಪ್ರಸಾದ್, ಮಹದೇವಪ್ರಸಾದ್, ಮಲ್ಲೇಶ್, ರಾಜಗೋಪಾಲ್, ವೀರಭದ್ರಪ್ಪ, ಹೆಗ್ಗಡಳ್ಳಿ ಸಿದ್ದು, ಬೈರೇಶ್, ದೀಪಾಶ್ರೀನಿವಾಸ್, ಚಿಕ್ಕತುಪ್ಪೂರು ಮಲ್ಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: