ಕರ್ನಾಟಕಪ್ರಮುಖ ಸುದ್ದಿ

ಸೆ.24-24 : ಸಾಹಿತ್ಯ ರಸಿಕರಿಗಾಗಿ ಮೈಸೂರು ದಸರಾ ಕವಿಗೋಷ್ಠಿ – ಈ ಬಾರಿ ಹಲವು ವೈಶಿಷ್ಟ್ಯಗಳ ಸಂಗಮ

ಮೈಸೂರು, ಸೆ.6 (ಪ್ರಮುಖ ಸುದ್ದಿ) : ಮೈಸೂರಿನ ನವರಾತ್ರಿ ಆಚರಣೆ ಇಂದು ಜಾಗತಿಕ ಮಟ್ಟದಲ್ಲಿ ದಸರಾ ಹಬ್ಬವಾಗಿ ತನ್ನ ಅನನ್ಯತೆಯನ್ನು ವಿಸ್ತರಿಸಿಕೊಂಡಿದೆ. ವಿಜಯದಶಮಿಯ ಆಚರಣೆಯು ಕೆಟ್ಟದ್ದನ್ನು ನಾಶಮಾಡುವ ಒಳ್ಳೆಯದನ್ನು ಪೋಷಿಸುವ ಸಂಕೇತವಾಗಿ ಕಳೆದ 406 ವರ್ಷಗಳಿಂದಲೂ ನಡೆದು ಬಂದಿದೆ.

ರಾಜಪ್ರಭುತ್ವದಿಂದ ಆರಂಭಗೊಂಡು ಸಮಕಾಲೀನ ಸಂದರ್ಭದ ಪ್ರಜಾಪ್ರಭುತ್ವದ ಚೌಕಟ್ಟಿನಡಿಯಲ್ಲಿ ದಸರಾ ಹಬ್ಬವು ಸಮಾನತೆಯ ನೆಲೆಯಲ್ಲಿ ರೂಪುಗೊಂಡಿದೆ. ಎಲ್ಲವನ್ನೂ – ಎಲ್ಲರನ್ನೂ ಒಳಗೊಳ್ಳುವ ಸಾಹಿತ್ಯದ ಕಾವ್ಯಗೋಷ್ಠಿಗಳು ದಸರಾದ ಪ್ರಮುಖ ಆಕರ್ಷಣೆ. ಕವಿಗೋಷ್ಠಿಯು ದಸರಾದ ಕಾವ್ಯಾಕರ್ಷಣೆಯಾಗಿದ್ದು 1980ರಿಂದಲೂ ಸತತವಾಗಿ ನಡೆಯುತ್ತಾ ಬಂದಿದೆ.

ಜಗನ್ಮೋಹನ ಅರಮನೆಯಲ್ಲಿ ಪ್ರಧಾನ ಕವಿಗೋಷ್ಠಿ, ಉಳಿದ ಗೋಷ್ಠಿಗಳು ವಿವಿಧ ಕಾಲೇಜು, ವಿಶ್ವವಿದ್ಯಾನಿಲಯದ ವೇದಿಕೆಗಳಲ್ಲಿ ನಡೆಯುತ್ತಿತ್ತು. ಈ ಬಾರಿಯ ಎಲ್ಲಾ ಕವಿಗೋಷ್ಠಿಗಳು ಜಗನ್ಮೋಹನ ಅರಮನೆಯಲ್ಲೇ ನಡೆಯುತ್ತಿರುವುದರಿಂದ ಅರಮನೆಯಲ್ಲಿ ಕಾವ್ಯ ವಾಚನ ಮಾಡುವ ಹೆಗ್ಗಳಿಕೆ ಎಲ್ಲರದು.

ಜಗನ್ಮೋಹನ ಅರಮನೆಯಲ್ಲಿ ನಾಡಿನ ಪ್ರಬುದ್ಧ ಕವಿಗಳ ಕಾವ್ಯದ ಅಲೆ ಅಲೆಗಳು ಮೇಳೈಸಿ ಕಾವ್ಯದ ಹೊಳೆಯೇ ತುಂಬಿ ಹರಿಯುತ್ತದೆ. ಇದರಲ್ಲಿ ಭಾಗವಹಿಸುವುದೇ ನಿಜವಾದ ಸಾರ್ಥಕತೆ ಎಂದು ಸಾಹಿತ್ಯ ವರ್ಗ ಪರಿಭಾವಿಸುತ್ತದೆ. ಈ ಬಾರಿಯ ಕವಿ ಗೋಷ್ಠಿಯನ್ನು ನಾಲ್ಕು ನೆಲೆಯಲ್ಲಿ ಆಯೋಜಿಸಲಾಗುತ್ತಿದೆ.

> ವಿಕಾಸ ಕವಿಗೋಷ್ಠಿ      > ವಿನೋದ ಕವಿಗೋಷ್ಠಿ
> ವಿಶಿಷ್ಟ ಕವಿಗೋಷ್ಠಿ       > ವಿಖ್ಯಾತರ ಕವಿಗೋಷ್ಠಿ

ವಿಕಾಸ ಕವಿಗೋಷ್ಠಿ :

“ವಿಕಾಸ ಕವಿಗೋಷ್ಠಿ”ಯಲ್ಲಿ ಮೈಸೂರಿನ ನೆರೆಹೊರೆಯ ಜಿಲ್ಲೆಗಳಾದ ಹಾಸನ, ಮಂಡ್ಯ, ಮಡಿಕೇರಿ, ಚಾಮರಾಜನಗರಗಳಿಂದ ಉದಯೋನ್ಮುಖ ಮಕ್ಕಳು, ಯುವಜನ, ಮಹಿಳೆ, ಹಿರಿಯರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪ್ರಾದೇಶಿಕ ಹಿರಿಮೆಗೆ, ಪ್ರತಿಭೆಯ ಅನಾವರಣಕ್ಕೆ ಈ ವೇದಿಕೆ ಸದಾವಕಾಶ ಒದಗಿಸಿಕೊಡುತ್ತದೆ.

ವಿನೋದ ಕವಿಗೋಷ್ಠಿ :

“ವಿನೋದ ಕವಿಗೋಷ್ಠಿ”ಯು 407ನೇ ವರ್ಷದ ದಸರಾದ ಕವಿಗೋಷ್ಠಿಯ ಜನಾಕರ್ಷಣೆಯಾಗಿದೆ. ಇದೇ ಮೊದಲ ಬಾರಿಗೆ ಆಯೋಜಿಸುತ್ತಿರುವ “ವಿನೋದ ಕವಿಗೋಷ್ಠಿ”ಯಲ್ಲಿ ವಿನೋದ ಕವಿತೆಗಳಿಗೆ ಪ್ರಸಿದ್ಧರಾಗಿರುವ ನಾಡಿನ ಹೆಸರಾಂತ ಕವಿಗಳು, ಕವನಗಳ ಮೂಲಕ ವಿಡಂಬನಾತ್ಮಕ ಹಾಸ್ಯವನ್ನು ಕಟ್ಟಿಕೊಡುವರು. ಕಾವ್ಯಕ್ಕಿರುವ ಅಸಾಧಾರಣ ಹಾಸ್ಯಶಕ್ತಿಗೆ ಈ ಗೋಷ್ಠಿ ಸಾಕ್ಷಿಯಾಗಬಲ್ಲದು. ಕೇವಲ ಮಾತಿನ ಮೂಲಕವಷ್ಟೇ ಅಲ್ಲದೆ ಪದಪದಗಳ ಜೋಡಣೆಯ ಪದ್ಯಗಳ ಮೂಲಕವೂ “ಹಾಸ್ಯ ರಸ” ಸ್ಫುರಿಸುವ ಕಾವ್ಯರಸಾಯನ ಈ ಗೋಷ್ಠಿ. ಜೊತೆಯಲ್ಲಿ ಈ ಗೋಷ್ಠಿಯಲ್ಲಿ ವಿನೋದಗೀತ ಗಾಯನವೂ ಇದ್ದು ಇದೊಂದು ವಿಭಿನ್ನ ಮಾದರಿಯ ಪ್ರಯೋಗ.

ವಿಶಿಷ್ಟ ಕವಿಗೋಷ್ಠಿ :

“ವಿಶಿಷ್ಟ ಕವಿಗೋಷ್ಠಿ”ಯ ವಿಶೇಷತೆ ಏನೆಂದರೆ, ಈ ಗೋಷ್ಠಿಯಲ್ಲಿ ಸಮಾಜದ ನಿರ್ಲಕ್ಷಿತ, ಶೋಷಿತ, ದಮನಿತ, ಅಸಹಾಯಕ, ನೊಂದ ಜೀವಗಳು, ಅನಾಥಾಶ್ರಮದ ಮಕ್ಕಳು, ವೃದ್ಧಾಶ್ರಮದ ಹಿರಿಯ ಜೀವಗಳು, ಲೈಂಗಿಕ ಶೋಷಣೆಗೆ ಒಳಗಾದವರು, ಮಂಗಳಮುಖಿಯರು, ದೇವದಾಸಿ ಪದ್ಧತಿಗೆ ಬಲಿಯಾದ ದಮನಿತರು, ವಿಶೇಷ ಚೇತನಗಳಾದ ವಾಕ್‍ಶಕ್ತಿ, ದೃಕ್‍ಶಕ್ತಿ ಕಳೆದುಕೊಂಡವರು, ದಿವ್ಯಾಂಗ ಚೇತನರು ಕವನ ವಾಚಿಸುವರು.

ಇದೇ ಮೊದಲ ಬಾರಿಗೆ ಈ ವರ್ಗದವರನ್ನು ದಸರಾ ಕಾವ್ಯಗೋಷ್ಠಿಯ ಮುಖ್ಯವಾಹಿನಿಗೆ ತರುತ್ತಿರುವುದು ಈ ಗೋಷ್ಠಿಯ ವೈಶಿಷ್ಟ್ಯತೆ. ಇಂತಹ ಅವಕಾಶ ವಂಚಿತರು ಮೊದಲ ಸಲ ತಮ್ಮ ಅನುಭವಗಳನ್ನು, ಹಸಿ ಹಸಿ ಭಾವನೆಗಳ ಮೂಲಕ ಕಟ್ಟಿಕೊಡುವ ವೇದಿಕೆ ಇದಾಗಿದೆ. ನೈಜ ಭಾವನೆಗಳ ಅಭಿವ್ಯಕ್ತಿ ಈ ಗೋಷ್ಠಿ. ನೊಂದ ಮನಗಳ ಕರುಳಿನ ಆರ್ತನಾದ, ಆರ್ದ್ರಭಾವಗಳನ್ನು ಆಲಿಸುವ, ಮಿಡಿಯುವ ಅವಕಾಶ ಸಹೃದಯರಿಗೆ ಇಲ್ಲಿದೆ.

ವಿಖ್ಯಾತ ಕವಿಗೋಷ್ಠಿ:

“ವಿಖ್ಯಾತ ಕವಿಗೋಷ್ಠಿ”ಯು ಕನ್ನಡ ನಾಡಿನ 30 ಜಿಲ್ಲೆಗಳ ಪ್ರಾತಿನಿಧ್ಯವನ್ನು ಕಾಯ್ದುಕೊಳ್ಳುತ್ತಿದ್ದು, ಸಹವರ್ತಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಉರ್ದು ಮತ್ತು ಬ್ಯಾರಿ ಭಾಷೆಗಳ ಕವಿಗಳೂ ಭಾಗವಹಿಸುತ್ತಾರೆ. ಈ ಗೋಷ್ಠಿಯಲ್ಲಿ ಕವಿತೆಗಳ ಪ್ರಬುದ್ಧತೆಯೇ ಪ್ರಮುಖ ಆದ್ಯತೆ.

2017 ರ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಗೆ ನಾಡಿನ ಪ್ರಸಿದ್ಧ ಕವಿಮನಸ್ಸುಗಳು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಆಗಮಿಸುತ್ತಿದ್ದು, ಶೋಷಿತರಿಗಾಗಿ ಪದಕಟ್ಟಿದ ಡಾ. ಸಿದ್ಧಲಿಂಗಯ್ಯ, ಸನ್ಮಾನ್ಯ ಸಚಿವರಾದ ಡಾ|| ಹೆಚ್. ಸಿ. ಮಹದೇವಪ್ಪ ಹಾಗೂ ಸನ್ಮಾನ್ಯ ಶಾಸಕರಾದ ಶ್ರೀ ವಾಸು ಆಗಮಿಸುವರು. ಡಾ. ಧರಣಿದೇವಿ ಮಾಲಗತ್ತಿ, ಡಾ.ಕೆ.ಬಿ.ಸಿದ್ದಯ್ಯ, ಶ್ರೀಮತಿ ಲತಾ ಹಂಸಲೇಖ ವಿಕಾಸ ಕವಿಗೋಷ್ಠಿಗೆ ಸಾಕ್ಷಿಯಾಗುವರು.

  • ವಿನೋದ ಕವಿಗೋಷ್ಠಿಗೆ ಡಾ. ಮುಖ್ಯಮಂತ್ರಿ ಚಂದ್ರು, ಸನ್ಮಾನ್ಯ ಸಚಿವರಾದ ಡಾ. ಗೀತಾ ಮಹದೇವ ಪ್ರಸಾದ್, ಖ್ಯಾತ ನಟಿ ಕುಮಾರಿ ಮಯೂರಿ ಅತಿಥಿಗಳಾಗಿ ಆಗಮಿಸುವರು. ಪ್ರೊ.ಚಂ.ಪಾ, ಬಿ.ಆರ್.ಲಕ್ಷ್ಮಣರಾವ್, ದುಂಡಿರಾಜ್, ಭುವನೇಶ್ವರಿ ಹೆಗಡೆ, ಜರಗನಹಳ್ಳಿ ಶಿವಶಂಕರ್, ಅಸಾದುಲ್ಲಾ ಬೇಗ್, ಎಂ.ಡಿ. ಗೊಗೇರಿ ಮತ್ತು ಸುಕನ್ಯಾ ಕಳಸ ಇವರುಗಳು ವಿನೋದ ಕವಿಗೋಷ್ಠಿಯಲ್ಲಿ ಭಾಗವಹಿಸುವರು. ಪಂಚಮ್ ಹಳಿಬಂಡಿ, ಮೇಘನಾ ಭಟ್ ಮತ್ತು ವೃಂದದವರು ಗೀತಗಾಯನ ಪ್ರಸ್ತುತಪಡಿಸುವರು.

ವಿಶೇಷ ಕವಿಗೋಷ್ಠಿಯಲ್ಲಿ ಡಾ. ಜಯಮಾಲ, ಸನ್ಮಾನ್ಯ ಸಚಿವರಾದ ಶ್ರೀಮತಿ ಉಮಾಶ್ರೀ, ಡಾ. ಕೆ. ನೀಲಾ, ಶ್ರೀ ಕೆಂಪಹೊನ್ನಯ್ಯ ಉಪಸ್ಥಿತರಿರುವರು.

ವಿಖ್ಯಾತ ಕವಿಗೋಷ್ಠಿಗೆ ಡಾ. ಎಸ್.ಜಿ. ಸಿದ್ಧರಾಮಯ್ಯ, ಖ್ಯಾತ ಗೀತ ರಚನಾಕಾರರಾದ ಶ್ರೀ ಜಯಂತ ಕಾಯ್ಕಿಣಿ ಮತ್ತು ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಇವರು ಮೆರಗು ನೀಡುವರು. ಈ ಕವಿಗೋಷ್ಠಿಗಳಲ್ಲಿ ಭಾಗವಹಿಸಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

  • ವಿಕಾಸ ಕವಿಗೋಷ್ಠಿಯಲ್ಲಿ ಭಾಗವಹಿಸಲು ಕನಿಷ್ಠ ಒಂದು ಕವನ ಸಂಕಲನವನ್ನು ಪ್ರಕಟಿಸಿರಬೇಕು. ಜೊತೆಗೆ 3 ವರ್ಷಗಳ ಒಳಗಿನ ಅವಧಿಯಲ್ಲಿ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚಿಸಿರಬಾರದು. ನೆರೆಹೊರೆಯ ನಾಲ್ಕು ಜಿಲ್ಲೆಗಳಿಂದ ತಲಾ ನಾಲ್ಕು ಕವಿಗಳು ಮತ್ತು ಮೈಸೂರು ಜಿಲ್ಲೆಯಿಂದ ಎಂಟು ಕವಿಗಳು, ಒಟ್ಟು ಇಪ್ಪತ್ನಾಲ್ಕು ಉದಯೋನ್ಮುಖ ಮಕ್ಕಳು, ಯುವ, ಮಹಿಳಾ ಮತ್ತು ಹಿರಿಯರನ್ನು ಇಲ್ಲಿ ಪ್ರೋತ್ಸಾಹಿಸಲಾಗುವುದು.

ವಿನೋದ ಕವಿಗೋಷ್ಠಿಯಲ್ಲಿ ಪ್ರಖ್ಯಾತರಾದ ಎಂಟು ಕವಿಗಳು, ಮೂರು ಹಂತದಲ್ಲಿ ಕವನವಾಚನ ಮಾಡುವರು. ನಡುವೆ ಜಿ.ಪಿ. ರಾಜರತ್ನಂ, ಟಿ.ಪಿ. ಕೈಲಾಸಂ ಇತ್ಯಾದಿ ಕವಿಗಳ ವಿನೋದ ಕವಿತೆಗಳನ್ನು ವೃಂದಗಾಯನ ತಂಡದವರು ವಾದ್ಯಮೇಳದೊಂದಿಗೆ ಪ್ರಸ್ತುತ ಪಡಿಸುವರು.

  • ವಿಶಿಷ್ಟ ಕವಿಗೋಷ್ಠಿಯಲ್ಲಿ ಇಪ್ಪತ್ತು ಕವಿಗಳು ಕವನ ವಾಚನ ಮಾಡುತ್ತಿದ್ದು, ಅವರಲ್ಲಿ ಇಬ್ಬರು ಮಂಗಳಮುಖಿಯರು, ಮೂವರು ದೇವದಾಸಿ ಮಹಿಳೆಯರು, ಪುನರ್ ವಸತಿ ಕೇಂದ್ರಗಳಿಂದ ಇಬ್ಬರು, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಂದ ನಾಲ್ವರು, ಬುಡಕಟ್ಟು ಜನಾಂಗದ ಇಬ್ಬರು, ಆರು ವಿಶೇಷ ಚೇತನರು ಹಾಗೂ ಒಬ್ಬರು ವಿದೇಶಿಗರು ಭಾಗವಹಿಸುತ್ತಿರುವುದೇ ವಿಶೇಷವಾಗಿರುತ್ತದೆ. ಈ ಗೋಷ್ಠಿಗೆ ಮೇಲಿನ ಯಾವುದೇ ಆಯ್ಕೆ ಮಾನದಂಡಗಳು ಅನ್ವಯಿಸುವುದಿಲ್ಲ. ವಿಶೇಷ ವರ್ಗದ ಪ್ರತಿಭೆಗಳನ್ನು ಇಲ್ಲಿ ಪ್ರೋತ್ಸಾಹಿಸಲಾಗುವುದು.

ವಿಖ್ಯಾತ ಕವಿಗೋಷ್ಠಿಯಲ್ಲಿ ಭಾಗವಹಿಸಲು ಕನಿಷ್ಠ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರಬೇಕು. ಇದರೊಂದಿಗೆ ಪ್ರತಿ ಜಿಲ್ಲೆಗೆ ಒಬ್ಬರಂತೆ ಒಟ್ಟು ಮೂವತ್ತು ಕವಿಗಳನ್ನು ಹಾಗೂ ಸಹವರ್ತಿ ಭಾಷೆಗಳಿಂದ ಐದು ಕವಿಗಳು ಸೇರಿದಂತೆ ಒಟ್ಟು ಮೂವತ್ತೈದು ಪ್ರಬುದ್ಧ ಕವಿಗಳಿಗೆ ಇಲ್ಲಿ ಅವಕಾಶವಿದೆ. ಜೊತೆಗೆ 3 ವರ್ಷಗಳ ಒಳಗಿನ ಅವಧಿಯಲ್ಲಿ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚಿಸಿರಬಾರದು. ಒಟ್ಟಾರೆ ವಿಶಿಷ್ಟವಾದ ಅರ್ಥಪೂರ್ಣ ಕವಿಗೋಷ್ಠಿ ಆಯೋಜಿಸುವ ಆಶಯ ಕವಿಗೋಷ್ಠಿ ಉಪಸಮಿತಿಯದ್ದು.

(ಎನ್.ಬಿ.)

Leave a Reply

comments

Related Articles

error: