ಮೈಸೂರು

ಬಂಗಾರಪ್ಪ ಜನಪರ ಆಡಳಿತ ನಡೆಸಿದ ಧೀಮಂತ ನಾಯಕ: ಜಿ.ಟಿ. ದೇವೇಗೌಡ

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ದೀನದಲಿತರ, ಬಡವರ, ಶೋಷಿತರ, ತುಳಿತಕ್ಕೊಳಗಾದವರ ಆಶಾಕಿರಣವಾಗಿ ಜನಪರ ಆಡಳಿತ ನಡೆಸಿದ ಧೀಮಂತ ನಾಯಕ ಎಂದು ಶಾಸಕ ಜಿ.ಟಿ. ದೇವೇಗೌಡ ಬಣ್ಣಿಸಿದರು.

ಬುಧವಾರ ಮೈಸೂರು ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬಂಗಾರಪ್ಪ ಅವರ 84ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿದ ಅವರು, “ಬಂಗಾರಪ್ಪ ಅವರು ಹಿಂದುಳಿದ ವರ್ಗದಿಂದ ಬಂದವರಾದರೂ ಅವರ ಆಲೋಚನೆಗಳು ಎಂದಿಗೂ ಹಿಂದುಳಿದಿರಲಿಲ್ಲ. ಸದಾ ದೂರದೃಷ್ಟಿಯುಳ್ಳ ಆಲೋಚನೆಗಳ ಮೂಲಕ ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಚಿಂತಿಸುತ್ತಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡಿದ್ದ ಜನಕಲ್ಯಾಣ ಕಾರ್ಯಕ್ರಮಗಳು ಇಂದಿಗೂ ಚಾಲ್ತಿಯಲ್ಲಿವೆ. ಅಧಿಕಾರಕ್ಕೆ ಬರುವ ಸರ್ಕಾರಗಳು ಅವರ ಕಾರ್ಯಕ್ರಮಗಳನ್ನು ಮಾದರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿವೆ. ಅಂತಹ ಜನಾನುರಾಗಿ ನಾಯಕ ಬಂಗಾರಪ್ಪ ಎಂದು ಶ್ಲಾಘಿಸಿದರು.

ಬಂಗಾರಪ್ಪ ಅವರು ನೇರ ನಡೆನುಡಿ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. 1983ರಲ್ಲಿ ಕ್ರಾಂತಿರಂಗ ಪಕ್ಷ ಕಟ್ಟಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಲು ಕಾರಣಕರ್ತರಾದವರು. ರೈತರಿಗಾಗಿ ಉಳುವ ಭೂಮಿ, ಸೂರಿಲ್ಲದರಿಗೆ ಸೂರು, ಪಂಪ್‌ಸೆಟ್, ವಿದ್ಯುತ್ ಶುಲ್ಕ ಮನ್ನಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷರಾದ ವೇಣುಗೋಪಾಲ್, ಮಂಜುನಾಥ್, ಪಾಲಿಕೆ ಸದಸ್ಯರಾದ ಕೆ.ವಿ. ಮಲ್ಲೇಶ್, ಬಾಲು, ವಕ್ತಾರ ಎಸ್‌ಬಿಎಂ ಮಂಜು, ಉಪಾಧ್ಯಕ್ಷ ಬೋರೇಗೌಡ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

comments

Related Articles

error: