ಕ್ರೀಡೆಮೈಸೂರು

ಬೆಂಗಳೂರು ಬ್ಲಾಸ್ಟರ್ ಮಣಿಸಿದ ಹುಬ್ಬಳ್ಳಿ ಟೈಗರ್ಸ್

ಮೈಸೂರು, ಸೆ.೬: ನಾಯಕ ಆರ್.ವಿನಯ್‌ಕುಮಾರ್(೨೮) ಹಾಗೂ ಪ್ರವೀಣ್ ದುಬೆ(ಅಜೇಯ ೩೨) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಬೆಂಗಳೂರು ಬ್ಲಾಸ್ಟರ್ ವಿರುದ್ಧ ೨ ವಿಕೆಟ್ ಗಳ ಗೆಲುವು ಸಾಧಿಸಿತು.

ಬುಧವಾರ ನಗರದ ಮಾನಸಗಂಗೋತ್ರಿಯ ಒಡೆಯರ್ ಗ್ಲೇಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ೧೦೩ ರನ್‌ಗಳ ಸುಲಭ ಗುರಿ ಪಡೆದ ಹುಬ್ಬಳ್ಳಿ ಟೈಗರ್ಸ್ ೧೯.೧ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೦೩ ರನ್‌ಗಳಿಸಿ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ಕೇವಲ ೧೦೨ರನ್‌ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರರಾದ ಎಂ.ವಿಶ್ವನಾಥ್(೨)  ರಾಜೂ ಭಟ್ಕಲ್(೦) ವೈಫಲ್ಯ ಅನುಭವಿಸಿದರು. ಬಳಿಕ ಕಣಕ್ಕಿಳಿದ ನಿಕ್ಕಿನ್ ಜೋಸ್(೭), ನಾಯಕ ಶಿಶಿರ್ ಭವಾನೆ(೪) ಬಂದ ವೇಗದಲ್ಲೇ ಪೆವಿಲಿಯನ್ ಸೇರಿದಂತೆ.  ಒಂದು ಹಂತದಲ್ಲಿ ೨೯ ರನ್‌ಗಳಿಗೆ ಪ್ರಮುಖ ೪ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಮಂಜೇಶ್‌ರೆಡ್ಡಿ ತಂಡಕ್ಕೆ ಆಸರೆಯಾದರು, ಪವನ್ ದೇಶಪಾಂಡೆ(೨೮) ಜತೆಗೂಡಿ ೩೧ ರನ್ ಹಾಗೂ ೮ನೇ ವಿಕೆಟ್‌ಗೆ ಮಿತ್ರಕಾಂತ್(ಅಜೇಯ ೧೨) ಜತೆಗೂಡಿ ೨೫ ರನ್ ಕಲೆಹಾಕುವ ಮೂಲಕ ತಂಡಕ್ಕೆ ನೆರವಾದರು. ಏಕಾಂಗಿಯಾಗಿ ಹೋರಾಟ ನಡೆಸಿದ ಮಂಜೇಶ್ ೪ ಬೌಂಡರಿ ಸಹಿತ ೩೦ ರನ್ ಗಳಿಸುವ ಮೂಲಕ ಬೆಂಗಳೂರು ತಂಡದ ಮೊತ್ತವನ್ನು ನೂರರ ಗಡಿದಾಟಿಸುವಲ್ಲಿ ನೆರವಾದರು. ಹುಬ್ಬಳ್ಳಿ ಪರ ಅಭಿಷೇಕ್ ಸಕೂಜ ೩, ಅಮನ್ ಖಾನ್ ೨, ವಿನಯ್‌ಕುಮಾರ್, ರಿತೇಶ್ ಭಟ್ಕಳ್, ಡೇವಿಡ್ ಮಥಾಯಿಸ್ ತಲಾ ೧ ವಿಕೆಟ್ ಪಡೆದರು.

ಸಾಧಾರಣ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ಆರಂಭಿಕ ವೈಫಲ್ಯ ಅನುಭವಿಸಿತು. ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್‌ವಾಲ್ (೧೦), ಅನುರಾಗ್ ಬಾಜ್‌ಪೈ(೬) ಬಹುಬೇಗ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ಅಮಾನ್ ಖಾನ್(೦), ಅಭಿಷೇಕ್ ರೆಡ್ಡಿ(೩) ಹಾಗೂ ಕೆ.ವಿ.ಸಿದ್ಧಾಥ್(೦) ಪೆವಿಲಿಯನ್ ಸೇರಿಕೊಂಡರು. ಈ ವೇಳೆ ೩೪ ಕ್ಕೆ ೫ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ  ನಾಯಕ ವಿನಯ್‌ಕುಮಾರ್ ಹಾಗೂ ಪ್ರವೀಣ್ ದುಬೆ ೪೫ ರನ್‌ಗಳ ಜತೆಯಾಟವಾಡಿ ಗೆಲುವು ಸಾಧಿಸಲು ಕಾರಣರಾದರು. ವಿನಯ್‌ಕುಮಾರ್ ಔಟಾದರೂ ತಾಳ್ಮೆಯ ಆಟವಾಡಿದ ದುಬೆ ಗೆಲುವಿನ ೧೯.೧ ಓವರ್‌ಗಳಲ್ಲಿ ಗೆಲುವಿನ ರನ್ ಗಳಿಸಿದರು. ಬೆಂಗಳೂರು ಪರ ಅಭಿಷೇಕ್ ಭಟ್ ೫, ಕೌಶಿಕ್ ೨, ಪ್ರಸಿದ್ಧ ಕೃಷ್ಣ ೧ ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್‍ಸ್ ಎರಡನೇ ಜಯ ದಾಖಲಿಸಿದರೆ, ಬೆಂಗಳೂರು ಬ್ಲಾಸ್ಟರ್ ಆಡಿದ ಎರಡನೇ ಪಂದ್ಯದಲ್ಲಿಯೂ ಸೋಲುಂಡಿತು. (ವರದಿ ಬಿ.ಎಂ)

 

 

 

Leave a Reply

comments

Related Articles

error: