ಪ್ರಮುಖ ಸುದ್ದಿಮೈಸೂರು

ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ಪ್ರೊ.ನಿಸಾರ್ ಅಹಮದ್ ಅವರಿಗೆ ಅಧಿಕೃತ ಆಹ್ವಾನ ನೀಡಿದ ಜಿಲ್ಲಾಡಳಿತ

ಮೈಸೂರು, ಸೆ.7:- ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ದಸರಾ ಉದ್ಘಾಟನೆಯನ್ನು  ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹಮದ್ ನೆರವೇರಿಸಲಿದ್ದಾರೆ. ಗುರುವಾರ ಮೈಸೂರು ಜಿಲ್ಲಾಡಳಿತ ಬೆಂಗಳೂರಿಗೆ ತೆರಳಿ  ಅವರನ್ನು ಅಧಿಕೃತವಾಗಿ ಆಹ್ವಾನಿಸಿದೆ.

ಬೆಂಗಳೂರಿನ ನಾಗರಬಾವಿಯಲ್ಲಿರುವ ಪ್ರೊ.ನಿಸಾರ್ ಅಹಮದ್ ಅವರ ನಿವಾಸಕ್ಕೆ ತೆರಳಿದ ಮೈಸೂರು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ಹಾಗೂ ಸ್ವಾಗತ ಸಮಿತಿಯ ಸದಸ್ಯರು ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದರು. ಸೆ.21ರಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾ ಉದ್ಘಾಟನೆಯನ್ನು ತಾವು ನೆರವೇರಿಸಬೇಕೆಂದು ಪ್ರೊ.ನಿಸಾರ್ ಅವರ ಬಳಿ ಕೇಳಿಕೊಂಡರಲ್ಲದೇ, ಫಲತಾಂಬೂಲ ನೀಡಿ, ಶಾಲು ಹೊದೆಸಿ ಆಹ್ವಾನ ನೀಡಿದರು. ಇದೇ ಸಂದರ್ಭ ದಸರಾ ಉದ್ಘಾಟನೆಯನ್ನು ನೆರವೇರಿಸುತ್ತಿರುವುದಕ್ಕೆ ಪ್ರೊ.ನಿಸಾರ್ ಅಹಮದ್ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ. ಬಾಲ್ಯದಲ್ಲಿರುವಾಗ ನಾಡಹಬ್ಬ ದಸರಾವನ್ನು ದೂರದಿಂದ ನೋಡುತ್ತಿದ್ದೆವು. ಆದರೆ ಈಗ ನಾಡಹಬ್ಬ ದಸರಾದ ಉದ್ಘಾಟನೆಯನ್ನು ನೆರವೇರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದಿದ್ದಾರೆ. ಈ ಸಂದರ್ಭ ಮಹಾನಗರಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಜು, ಅಪರ ಜಿಲ್ಲಾಧಿಕಾರಿ ಯೋಗೇಶ್, ಸ್ವಾಗತ ಸಮಿತಿ ಕಾರ್ಯದರ್ಶಿ ಟಿ. ಮಹೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪುಟ್ಟಶೇಷಗಿರಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: