ಕರ್ನಾಟಕ

ರಸಪ್ರಶ್ನೆಯಿಂದ ವ್ಯಕ್ತಿತ್ವ ವಿಕಸನವಾಗಲಿದೆ : ವಿನೋದ್‍ಕುಮಾರ್ ಬಾಕ್ಲಿವಾಲ್

ರಾಜ್ಯ(ಹಾಸನ)ಸೆ.7:- ಶ್ರವಣಬೆಳಗೊಳದಲ್ಲಿ ಮೂರ್ತಿ ನಿರ್ಮಾಣವಾದ 10 ನೇ ಶತಮಾನದಿಂದಲೂ 58.8 ಅಡಿ ಎತ್ತರದ ಬಾಹುಬಲಿಗೆ ಕಾಲಕಾಲಕ್ಕೆ ಮಹಾಮಸ್ತಕಾಭಿಷೇಕಗಳು ನೆರವೇರುತ್ತಾ ಬಂದಿದೆ. ಮಹಾಮಸ್ತಕಾಭಿಷೇಕದೊಡನೆ ಅಂದಂದಿನ ಜನಜೀವನ, ವ್ಯವಸ್ಥೆ, ಅಭಿವೃದ್ಧಿಗಳನ್ನು ಗುರುತಿಸಬಹುದು ಎಂದು ಮಹಾಮಸ್ತಕಾಭಿಷೇಕ ಮಹೋತ್ಸವದ ಆಹಾರ ಉಪಸಮಿತಿ ಅಧ್ಯಕ್ಷ ವಿನೋದ್‍ಕುಮಾರ್ ಬಾಕ್ಲಿವಾಲ್ ಹೇಳಿದರು.
ಅವರು ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದಶಲಕ್ಷಣ ಪರ್ವದ ಅಂಗವಾಗಿ ಮಹಾಮಸ್ತಕಾಭಿಷೇಕ ಮತ್ತು ಶ್ರವಣಬೆಳಗೊಳದ ಬಗ್ಗೆ ನಡೆದ ವಿಶೇಷ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರಲ್ಲಿ ಸೃಜನಶೀಲತೆ ಉಂಟಾಗಿ ಇತಿಹಾಸ, ಸಾಹಿತ್ಯ, ಧಾರ್ಮಿಕ, ಶಿಲ್ಪಕಲೆ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಬಹುದು, ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡು ವ್ಯಕ್ತಿತ್ವ ವಿಕಸನವಾಗಲು ಸಹಾಯವಾಗಲಿದೆ ಎಂದು ಹೇಳಿದರು. ರಸಪ್ರಶ್ನೆ ಕಾರ್ಯಕ್ರಮವನ್ನು ಗೊಮ್ಮಟವಾಣಿ ಸಂಪಾದಕ ಎಸ್.ಎನ್.ಅಶೋಕ್ ಕುಮಾರ್ ನಡೆಸಿಕೊಟ್ಟರು. ಚಂದ್ರನಾಥ್ (ಪ್ರಥಮ), ಪವನ್ (ದ್ವೀತಿಯ), ನಿರ್ಮಲಮ್ಮ (ತೃತೀಯ) ಬಹುಮಾನವನ್ನು ಪಡೆದುಕೊಂಡರು. ಬಹುಮಾನದ ಪ್ರಾಯೋಜಕತ್ವವನ್ನು ಕಲ್ಕತ್ತಾದ ಕಸ್ತೂರಿ ಬಾಯಿ ಅವರು ವಹಿಸಿಕೊಂಡಿದ್ದರು. ದಶಲಕ್ಷಣ ಪರ್ವದ 10 ದಿನಗಳಲ್ಲೂ ಸಹ ಶ್ರವಣಗೆಳಗೊಳದ ಇತಿಹಾಸ, ಧರ್ಮ, ಸಾಹಿತ್ಯ, ಶಿಲ್ಪಕಲೆಯ ಬಗ್ಗೆ ಧಾರ್ಮಿಕ ಪ್ರಶ್ನೋತ್ತರ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ತೀರ್ಥಕ್ಷೇತ್ರ ಕಮಿಟಿ ಕರ್ನಾಟಕ ವಲಯದ ಅಧ್ಯಕ್ಷ ಅಶೋಕ್ ಸೇಠಿ, ಖಂಡೇಲ್‍ವಾಲ್ ಸಮಾಜದ ಅಧ್ಯಕ್ಷ ನಿಹಾಲ್‍ಚಂದ್ ಉಪಸ್ಥಿತರಿದ್ದರು. ನಂತರ ಸಾಂಗ್ಲಿಯ ಕುಬೇರ್ ಚೌಗುಲೆಯವರ ಸಂಗೀತ ಕಾರ್ಯಕ್ರಮದೊಂದಿಗೆ ಆರತಿ ಕಾರ್ಯಕ್ರಮ ನಡೆಯಿತು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: