ಮೈಸೂರು

ಶಿಕ್ಷಕರೇ ನಿಜವಾದ ರಾಷ್ಟ್ರಶಿಲ್ಪಿಗಳು: ಬನ್ನೂರು ರಾಜು

ಮೈಸೂರು, ಸೆ.೭: ತಮ್ಮ ಜ್ಞಾನವನ್ನು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ಧಾರೆಯೆರೆದು ಕಗ್ಗಲ್ಲನ್ನೂ ಕೆತ್ತಿ ಸುಂದರ ಶಿಲ್ಪವಾಗಿಸುವಂತೆ ಅವರನ್ನು ತಿದ್ದಿ, ತೀಡಿ ಸತ್ಪ್ರಜೆಗಳನ್ನಾಗಿ ರೂಪಿಸಿ ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುವ ಶಿಕ್ಷಕರೇ ನಿಜವಾದ ರಾಷ್ಟ್ರಶಿಲ್ಪಿಗಳೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಜೆಎಸ್‌ಎಸ್ ಬಾಲಜಗತ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮೈಸೂರು ಕನ್ನಡ ವೇದಿಕೆ ವತಿಯಿಂದ ನಡೆದ ಶಿಷ್ಯರಿಂದ ಶಿಕ್ಷಕರಿಗೆ ಶುಭಕೋರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರವನ್ನು ಸರಿದಾರಿಗೆ ಕೊಂಡೊಯ್ಯವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ. ಶಿಕ್ಷಕರ ವೃತ್ತಿ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದುದು. ಅಷ್ಟೇ ಪವಿತ್ರವಾದದ್ದು. ತಂದೆ-ತಾಯಿಗಳಿಗಿಂತಲೂ ಗುರುವಿನ ಸ್ಥಾನ ಹಿರಿದು. ಇಂತಹ ಪವಿತ್ರವಾದ ಕಾಯಕದಲ್ಲಿ ತೊಡಗಿರುವ ಪ್ರತಿಯೊಬ್ಬ ಶಿಕ್ಷಕರನ್ನೂ ಪ್ರತಿದಿನವೂ ವಿದ್ಯಾರ್ಥಿಗಳು ಅತ್ಯಂತ ಗೌರವದಿಂದ ಕಾಣಬೇಕು. ಶಿಕ್ಷಕರು, ಮಕ್ಕಳನ್ನು ಸನ್ಮಾರ್ಗದ ಬೆಳಕಿನಲ್ಲಿ ಮುನ್ನಡೆಸಿ ಸಮಾಜದಲ್ಲಿ ಪ್ರಜ್ಞಾವಂತರನ್ನಾಗಿ ನಿರ್ಮಾಣ ಮಾಡುವ  ಬಹುದೊಡ್ಡ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ಅದಕ್ಕಾಗಿಯೇ ಯಾವುದೇ ವೃತ್ತಿಗೆ ಇಲ್ಲದಿರುವಷ್ಟು ಘನತೆ, ಗೌರವ, ಮಹತ್ವ ಶಿಕ್ಷಕ ವೃತ್ತಿಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾರದ ಮಹಾನು ಭಾವರೆಂದರೆ ಅದು ವಿದ್ಯೆ ಕಲಿಸಿದ ಶಿಕ್ಷಕರು ಮಾತ್ರವೆಂದು ಹೇಳಿದ ಅವರು, ಆದರ್ಶ ಶಿಕ್ಷಕರಾಗಿದ್ದು ರಾಷ್ಟ್ರಪತಿಯಂತಹ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವಾದರ್ಶಗಳು ಇಂದಿನ ಪ್ರತಿಯೊಬ್ಬ ಶಿಕ್ಷಕರಿಗೂ ಮಾದರಿಯಾಗಬೇಕೆಂದರು.

ಶಿಕ್ಷಕ-ಶಿಕ್ಷಕಿಯರಿಗೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ಶಿಕ್ಷಕ ದಿನಾಚರಣೆಯ ಶುಭಾಶಯ ಕೋರುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಗುರು ನಮನ ಸಲ್ಲಿಸಿದರು.

ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ರೇವಣ್ಣ, ಆರ್.ವಿ.ರಾಧಾಕೃಷ್ಣ, ಪ್ಯಾಲೇಸ್ ಬಾಬು, ಗೋಪಿ, ಮಹೇಶ್, ಮಧುಸೂದನ್ ಮುಂತಾದವರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

 

Leave a Reply

comments

Related Articles

error: