ಸುದ್ದಿ ಸಂಕ್ಷಿಪ್ತ

ಗೌರಿ ಹತ್ಯೆಗೆ ನಗರ ಕಾಂಗ್ರೆಸ್ ಖಂಡನೆ

ಮಡಿಕೇರಿ ಸೆ.7 : ಹಿರಿಯ ಪತ್ರಕರ್ತರಾದ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್ ಹಾಗೂ ಪದಾಧಿಕಾರಿಗಳು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಒಬ್ಬ ನಿರಾಯುಧ ಮಹಿಳೆಯನ್ನು ಅಮಾನುಷವಾಗಿ ಕೊಲೆಗೈದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕೊಲೆಗಟುಕರನ್ನು ಪತ್ತೆ ಹಚ್ಚಿ ಬಂಧಿಸುವ ಮೂಲಕ ವಿಚಾರವಾದಿಗಳಿಗೆ, ಪ್ರಗತಿಪರ ಚಿಂತಕರಿಗೆ, ಹಾಗೂ ಪತ್ರಕರ್ತರಿಗೆ ಆತ್ಮಸ್ಥೈರ್ಯವನ್ನು ತುಂಬಬೇಕು ಎಂದು ಅವರು ತಿಳಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುತ್ತಿದ್ದ ಮತ್ತು ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ನಿರಂತರ ವೈಚಾರಿಕ ಸಂಘರ್ಷಕ್ಕಿಳಿಯುತ್ತಿದ್ದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ಸೌಹಾರ್ದಯುತ ಸಮಾಜಕ್ಕೆ ಅಪಮಾನ ಮಾಡಿದಂತ್ತಾಗಿದೆ. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕು ಮತ್ತು ಸಾಹಿತಿಗಳಿಗೆ, ವಿಚಾರವಾದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೆ.ಯು.ಅಬ್ದುಲ್ ರಜಾಕ್ ಒತ್ತಾಯಿಸಿದ್ದಾರೆ. ಸಾಮಾಜಿಕ ಕಳಕಳಿ ಮತ್ತು ಏಕತೆಯ ಚಿಂತನೆ ಹೊಂದಿದ್ದ ಗೌರಿ ಲಂಕೇಶ್ ಅವರ ಶಾಂತಿಯುತ ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. (ವರದಿ: ಕೆಸಿಐ, ಎಲ್.ಜಿ)
 

Leave a Reply

comments

Related Articles

error: