ಕರ್ನಾಟಕಪ್ರಮುಖ ಸುದ್ದಿ

ಅನಾಥ, ಪರಿತ್ಯಕ್ತ ಶಿಶುಗಳ ರಕ್ಷಣೆಗಾಗಿ ‘ಮಮತೆಯ ತೊಟ್ಟಿಲು’ : ಮಾರಾಟ ತಡೆಗಟ್ಟಲು ಸಹಾಯವಾಣಿ

ಬೆಂಗಳೂರು, ಸೆ.8 (ಪ್ರಮುಖ ಸುದ್ದಿ) : ಮಗು ಬೇಡವಾದಲ್ಲಿ, ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಬಿಸಾಡಿ ಎಳೆಯ ಜೀವಗಳನ್ನು ಬೀದಿ ನಾಯಿ, ವಿಷ ಜಂತುಗಳಿಗೆ ಬಲಿ ನೀಡಿ ಹಿಂಸಿಸುವುದು ಬೇಡ, ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿಯೇ ಇರುವ ವಿಶೇಷ ದತ್ತು ಕೇಂದ್ರಗಳಲ್ಲಿ ಹಾಗೂ ಬಾಲಮಂದಿರಗಳಲ್ಲಿನ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಿ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೂತನ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರು ನಗರ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕ, ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದಲ್ಲಿ ಅನಾಥ ಶಿಶುಗಳ ರಕ್ಷಣೆಗೆ ಮಮತೆಯ ತೊಟ್ಟಿಲನ್ನು ಅಧೀಕ್ಷಕರು, ಸರ್ಕಾರಿ ಶಿಶುಮಂದಿರ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಚ್.ಮರಿಗೌಡ ರಸ್ತೆ, ಬೆಂಗಳೂರು – 560 029 ಇಲ್ಲಿ ಇರಿಸಲಾಗಿದೆ.

ಮಮತೆಯ ತೊಟ್ಟಿಲಿನ ಮಾಹಿತಿ ಹಾಗೂ ವಿಳಾಸಕ್ಕಾಗಿ ದೂರವಾಣಿ  080–26569344 ಮೂಲಕ ಅಥವಾ ಇ-ಮೇಲ್ [email protected] ಗೆ ಮೇಲ್ ಮಾಡಬಹುದಾಗಿದೆ.

ಭಿತ್ತಿಪತ್ರದಲ್ಲಿ “ಎಚ್ಚರಿಕೆ : ಮಕ್ಕಳನ್ನು ಮಾರಾಟ ಮಾಡಬೇಡಿ” ಎಂಬ ಘೋಷಾ ವಾಕ್ಯದೊಂದಿಗೆ ಮಕ್ಕಳ ಮಾರಾಟ ಘೋರ ಅಪರಾಧ, ಮಾರಾಟ ಮಾಡುವವರಿಗೂ ಹಾಗೂ ಕೊಳ್ಳುವವರಿಗೆ 5 ವರ್ಷಗಳ ಸೆರೆಮನೆ ವಾಸದ ಜೊತೆಗೆ ರೂ 1,00,000/- ಗಳ ವರೆಗೆ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದಲ್ಲಿ ಶಿಕ್ಷೆಯ ಅವಧಿ 7 ವರ್ಷಗಳವರೆಗೆ ವಿಸ್ತರಣೆ (ಬಾಲನ್ಯಾಯ ಕಾಯ್ದೆ 2015) ಮಾಡುವ ಮೂಲಕ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಸಹ ನೀಡಿದೆ.

ಅನಾಥ ಶಿಶುಗಳು ಕಂಡು ಬಂದಲ್ಲಿ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಮಕ್ಕಳ ಸಹಾಯವಾಣಿ – 1098, ಮಕ್ಕಳ ಕಲ್ಯಾಣ ಸಮಿತಿ – 080 – 26577821, ಪೊಲೀಸ್ ಸಹಾಯವಾಣಿ – 100, ವಿಶೇಷ ದತ್ತು ಕೇಂದ್ರ – ಸರ್ಕಾರಿ ಶಿಶುಗೃಹ – 080-26569344, ಮಾತೃಛಾಯ – 080-26713421, ಸೆಂಟ್ ಮೈಕಲ್ ಹೋಮ್ : 080-25200592, ಅನಾಥ ಶಿಶು ನಿವಾಸ : 080 -26675543, ಶಿಶುಮಂದಿರ – 080-25610456 ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26560273, ಇ-ಮೇಲ್ [email protected] ಮೇಲ್ ಮಾಡಬಹುದು, ಅಂತರ್ಜಾಲ www.dcpublr.org ದಲ್ಲಿ ವೀಕ್ಷಿಸಬಹುದಾಗಿದೆ.

(ಎನ್.ಬಿ)

Leave a Reply

comments

Related Articles

error: