ಕರ್ನಾಟಕಪ್ರಮುಖ ಸುದ್ದಿಮೈಸೂರು

ಕೆಆರ್ ಎಸ್ ಹಿನ್ನೀರಿನಲ್ಲಿ ಪೂಜೆ ಸಲ್ಲಿಸಿದ ಸದ್ಗುರು ಜಗ್ಗಿ ವಾಸುದೇವ್

ಮೈಸೂರು,ಸೆ.8:- ನಮ್ಮ ದೇಶದ ಜೀವನಾಡಿಗಳೇ ನದಿಗಳು. ನಮ್ಮ ಸಂಸ್ಕೃತಿ ನಾಗರೀಕತೆಗಳು ನದಿಯ ದಡದಲ್ಲಿಯೇ ರೂಪುಗೊಂಡಿತು ಎಂದು ಇತಿಹಾಸ ತಿಳಿಸುತ್ತದೆ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ದೇಶದ ನದಿಗಳೆಲ್ಲವೂ ನಶಿಸಿ ಹೋಗುವ ಹಂತ ತಲುಪಿದ್ದು, ನದಿಗಳು ಬತ್ತಿ ಕೇವಲ ಮಳೆಗಾಲದಲ್ಲಿ ಮಾತ್ರ ಕಾಣ ಸಿಗುವ ನದಿಗಳಾದರೂ ಅಚ್ಚರಿಯೇನಿಲ್ಲ. ಅದಕ್ಕಾಗಿಯೇ ನದಿ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ.

ದೇಶಾದ್ಯಂತ ನದಿ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿಯೂ ನಡೆಯುತ್ತಿದೆ. ಮೈಸೂರಿನಲ್ಲಿಯೂ ಕಳೆದ ಕೆಲವು ದಿನಗಳ ಹಿಂದೆ ಹಲವು ಸಂಘ, ಸಂಸ್ಥೆಗಳು ನದಿ ಉಳಿಸಿ ಅಭಿಯಾನ ಹಮ್ಮಿಕೊಂಡಿದ್ದವು. ಶುಕ್ರವಾರ ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ನದಿ ಉಳಿಸಿ ಕುರಿತಂತೆ ಕಾರ್ಯಕ್ರಮ ಜರುಗಲಿದ್ದು, ಕೊಯಮತ್ತೂರಿನ ಈಶಾ ಫೌಂಡೇಶನ್ನಿನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಪಾಲ್ಗೊಳ್ಳಲಿದ್ದಾರೆ. ಅವರು ಶುಕ್ರವಾರ ಬೆಳಿಗ್ಗೆ  ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಸಮೀಪದ ಮೀನಾಕ್ಷಿಪುರದಲ್ಲಿರುವ ಹಿನ್ನೀರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಶಾಸಕ ಪುಟ್ಟಣ್ಣಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಸದ್ಗುರು ಜಗ್ಗಿ ವಾಸುದೇವ್ ಸೆಪ್ಟೆಂಬರ್ 3ರಿಂದಲೇ ನದಿ ಉಳಿಸಿ ಅಭಿಯಾನ ಆರಂಭಿಸಿದ್ದು, ಸೆ.8ರಂದು ಮೈಸೂರು ಹಾಗೂ ಸೆ.9ರಂದು ಬೆಂಗಳೂರಿನಲ್ಲಿ ರಾಜ್ಯದ ಜನತೆಯನ್ನು ನದಿ ಉಳಿಸಿ ಅಭಿಯಾನದ ,ಮೂಲಕ ಜಾಗೃತಗೊಳಿಸಲಿದ್ದಾರೆ. ನಮ್ಮ ನದಿಗಳ ದುಸ್ಥಿಯ ಕುರಿತು ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಭಿಯಾನದಲ್ಲಿ ನಮ್ಮ ಕೈಲಾದಷ್ಟು, ನಮಗೆ ತೋರಿದಂತೆ ಭಾಗವಹಿಸಬೇಕು. ಮುಂದಿನ ಪೀಳಿಗೆಗೆ ನಾವು ನೀಡಬೇಕಾಗಿರುವುದು ಸಮೃದ್ಧವಾದ ನದಿ-ನೆಲ ಮಾತ್ರ. ಆದ್ದರಿಂದ ಜನಜಾಗೃತಿ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಎಂದು ಅವರು ವಿನಂತಿಸಿದ್ದಾರೆ. ಇದು ಚಳುವಳಿಯಲ್ಲ. ಇದೊಂದು ಅಭಿಯಾನ ಎಂದು ಸ್ಪಷ್ಟಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: