ಕರ್ನಾಟಕಪ್ರಮುಖ ಸುದ್ದಿ

ಕನ್ನಡ ಅನುಷ್ಠಾನ ಕುರಿತು ದೆಹಲಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು, ಸೆ.8 (ಪ್ರಮುಖ ಸುದ್ದಿ): ಬ್ಯಾಂಕಿಂಗ್ ಕ್ಷೇತ್ರದ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ ಹಾಗೂ ವಿತ್ತ ಸಚಿವರ ಭೇಟಿಗಾಗಿ ನವದೆಹಲಿಗೆ ಆಗಮಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದ ನಿಯೋಗವು ಗುರುವಾರ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಛೇರಿಯ ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿತು.

ಕಡತಗಳ ಟಿಪ್ಪಣಿಗಳಲ್ಲಿ ಆಂಗ್ಲ ಭಾಷೆಯನ್ನು ಬಳಸುತ್ತಿರುವ ಅಧಿಕಾರಿ ಸಿಬ್ಬಂದಿಗಳ ಮೇಲೆ ಕೂಡಲೇ ಶಿಸ್ತು ಕ್ರಮ ಜಾರಿ ಮಾಡುವಲ್ಲಿ ಕಾರಣ ಕೇಳಿ ನೋಟಿಸ್‍ಗಳನ್ನು ನೀಡಲು ಪ್ರೊ. ಎಸ್.ಜಿ.ಎಸ್. ನಿವಾಸಿ ಆಯುಕ್ತರಾದ ನಿಲಯ್ ಮಿತಶ್‍ ಅವರಿಗೆ ಸೂಚಿಸಿದರು.

ಹೊರಗುತ್ತಿಗೆಯ ಮೇಲೆ ಕಾರ್ಯನಿರ್ವಹಿಸುತ್ತಿರುವ 224 ಸಿಬ್ಬಂದಿಗಳ ಪೈಕಿ ಕೇವಲ 16 ಜನ ಮಾತ್ರ ಕನ್ನಡಿಗರಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಮೂರು ತಿಂಗಳೊಳಗೆ ಈ ಎಲ್ಲ ಕನ್ನಡೇತರ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಲು ಸೂಚನೆ ನೀಡಲಾಯಿತು.

ದೆಹಲಿಯ ಕನ್ನಡ ಶಾಲೆಗಳಿಗೆ ಕನ್ನಡ ಪುಸ್ತಕಗಳನ್ನು ಒದಗಿಸುವಲ್ಲಿ ವಿಳಂಬವಾಗಿರುವ ಅಂಶವನ್ನು ಗಂಭೀರವಾಗಿ ಅವಲೋಕಿಸಿ ಕೂಡಲೇ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪರ್ಕಿಸಿ ಅಗತ್ಯ ವ್ಯವಸ್ಥೆ ಮಾಡಲು ನಿವಾಸಿ ಆಯುಕ್ತರಿಗೆ ಸೂಚಿಸಿದರು.

ಕರ್ನಾಟಕ ಭವನದ ಆಡಳಿತ ಕನ್ನಡಿಗರ ಹಿತದೃಷ್ಟಿಯಿಂದ ನಡೆಸಬೇಕಿದ್ದು ಕೇಂದ್ರದ ಯೋಜನೆಗಳು ರಾಜ್ಯದಲ್ಲಿ ಸಮರ್ಥವಾಗಿ ಅನುಷ್ಠಾನವಾಗುವ ನಿಟ್ಟಿನಲ್ಲಿ ಈ ಕಛೇರಿ ಕೊಂಡಿಯಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಪ್ರೊ. ಎಸ್.ಜಿ.ಎಸ್. ಹೇಳಿದರು.

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಹಿತಿಗಳಾದ ಪ್ರೊ. ಕೆ. ಮರುಳಸಿದ್ದಪ್ಪ, ಡಾ. ಸಿದ್ದಲಿಂಗಯ್ಯ, ಶ್ರೀಮತಿ ಬಿ.ಟಿ. ಲಲಿತ ನಾಯಕ್, ಡಾ. ಎಲ್. ಹನುಮಂತಯ್ಯ ಹಾಗೂ ಮಾಜಿ ಶಾಸಕರಾದ ಡಾ. ಮುಖ್ಯಮಂತ್ರಿ ಚಂದ್ರು,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಶ್ರೀ ರವೀಂದ್ರ ಬಿ.ಎಸ್. ಮತ್ತು ನಾರಾಯಣ ರಾಯಚೂರು ಮತ್ತು ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಕೆ. ಮುರಳಿಧರ ಅವರುಗಳು ಹಾಜರಿದ್ದರು.

ನಂತರ ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕನ್ನಡ ಅಧ್ಯಯನ ಪೀಠಕ್ಕೆ ಭೇಟಿ ನೀಡಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತಂತೆ ಅವಲೋಕಿಸಿತು. ಈ ಸಂದರ್ಭದಲ್ಲಿ ಕನ್ನಡ ಪೀಠದ ಮುಖ್ಯಸ್ಥರಾದ ಪ್ರೊ. ಪುರುಶೋತ್ತಮ ಬಿಳಿಮಲೆ ಅವರು ಹಾಜರಿದ್ದರು.

(ಎನ್.ಬಿ)

Leave a Reply

comments

Related Articles

error: