ಮೈಸೂರು

ಮಾದಕ ವ್ಯಸನ ಮಾರಣಾಂತಿಕ ರೋಗಗಳಿಗಿಂತಲೂ ಮಾರಕ : ಗಣೇಶ್ ಅಭಿಮತ

ಮೈಸೂರು ಸೆ.8:- ಮಾದಕ ವ್ಯಸನವೆಂಬುದು ಕ್ಯಾನ್ಸರ್, ಏಡ್ಸ್ ಮತ್ತಿತರ ಮಾರಣಾಂತಿಕ ರೋಗಗಳಿಗಿಂತಲೂ ಮಾರಕವಾದುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಗಣೇಶ್ ಅಭಿಪ್ರಾಯಪಟ್ಟರು.

ಅವರು ಪಿರಿಯಾ ಪಟ್ಟಣದ ಯಜಮಾನ್ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ರೋಟರಿ ಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಗುರುವಾರ ಏರ್ಪಡಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಮಾದಕ ವ್ಯಸನದಂತಹ ದುಶ್ಚಟಗಳಿಂದಾಗಿ ಭಾರತದಲ್ಲಿ ಪ್ರತಿವರ್ಷ 8 ಲಕ್ಷಕ್ಕೂ ಹೆಚ್ಚು ಮಂದಿ ಮೃತ ಪಡುತ್ತಿದ್ದಾರೆ ಎಂಬ ಮಾಹಿತಿಯು ಆತಂಕಕಾರಿಯಾದ ವಿಷಯವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳ ಕಾಲೇಜು ಸುತ್ತಮುತ್ತಲಿನಲ್ಲಿ ಮಾದಕ ಪದಾರ್ಥಗಳ ಮಾರಾಟ ಹೆಚ್ಚುತ್ತಿರುವುದು ಕಂಡು ಬರುತ್ತಿದ್ದು ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯವಾಗಿದೆ ಎಂದರು. ವಿದ್ಯಾರ್ಥಿ ಹಂತದಲ್ಲಿ ದುಶ್ಚಟಗಳನ್ನು ಮೈಗೂಡಿಸಿಕೊಂಡಲ್ಲಿ ಮುಂದಿನ ಜೀವನ ಕ್ಲಿಷ್ಟಕರವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ ಇಂದಿನ ಯುವ ವಿದ್ಯಾರ್ಥಿಗಳು ದೇಶ ಕಟ್ಟುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ ಎಂದರು. ಕಾಲೇಜು ಹಂತವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಸಮಯವಾಗಿದ್ದು ಈ ಹಂತದಲ್ಲಿ ಚಂಚಲತೆಗೆ ಅವಕಾಶ ನೀಡದೆ ಗುರಿ ತಲುಪುವ ಪ್ರಯತ್ನ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ರಮೇಶ್, ಮೇಲ್ವಿಚಾರಕ ಧನಂಜಯ್, ರೋಟರಿ ಮಾಜಿ ಅಧ್ಯಕ್ಷ ಸಿ.ಎನ್.ವಿಜಯ್, ನವೀನ್‍ಕುಮಾರ್, ಪ್ರಾಂಶುಪಾಲ ನಾಗಪ್ರಶಾಂತ್ ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: