
ಕರ್ನಾಟಕಪ್ರಮುಖ ಸುದ್ದಿ
ಎಂ.ಕೆ. ಗಣಪತಿ ಅವರ ನಿಗೂಢ ಸಾವಿನ ಪ್ರಕರಣ ಹಿನ್ನೆಲೆ : ಸಿಎಂ ರಾಜೀನಾಮೆ ಕೇಳಿದರೆ ಕೊಡಲು ಸಿದ್ಧ ; ಸಚಿವ ಕೆ.ಜೆ. ಜಾರ್ಜ್
ರಾಜ್ಯ(ಬೆಂಗಳೂರು)ಸೆ.8:- ಡಿವೈಎಸ್ಪಿ ದಿ. ಎಂ.ಕೆ. ಗಣಪತಿ ಅವರ ನಿಗೂಢ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ರಾಜೀನಾಮೆ ಕೇಳಿದರೆ ತಾವು ಕೊಡಲು ಸಿದ್ಧ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇದೇ ಆರೋಪ ಕೇಳಿಬಂದಾಗ ತಕ್ಷಣವೇ ರಾಜೀನಾಮೆ ನೀಡಿದ್ದೆ. ಈಗಲೂ ನನ್ನ ತಪ್ಪು ಇದ್ದರೆ ಸಿಎಂ ರಾಜೀನಾಮೆ ಕೇಳಿದರೆ ಕೊಡಲು ಸಿದ್ಧ ಎಂದು ತಿಳಿಸಿದರು. ಸಿಐಡಿ ಈಗಾಗಲೇ ತನಿಖೆ ನಡೆಸಿ, ವರದಿಯನ್ನು ನೀಡಿದೆ. ಸಚಿವ ಜಾರ್ಜ್ ಅವರ ಪಾತ್ರವೇನೂ ಇಲ್ಲ ಎಂದು ವರದಿಯಲ್ಲಿ ಹೇಳಿದೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್ ಇನ್ನೂ ಏಕೆ ಈ ಪ್ರಕರಣ ಕುರಿತಂತೆ ತನಿಖೆಗೆ ಆದೇಶಿಸಿದೆ ಎಂದು ತಿಳಿದಿಲ್ಲ. ಆದರೆ ಎಲ್ಲೂ ಕೂಡ ನನ್ನ ಹೆಸರನ್ನು ಉಲ್ಲೇಖಿಸಿಲ್ಲ ಎಂದು ತಿಳಿಸಿದರು. ನನ್ನನ್ನು ಅಲ್ಪಸಂಖ್ಯಾತನೆಂದೇ ಹೇಳಲಾಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾಂಗ್ರೆಸ್ ಪಕ್ಷವಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಹಾಗಾಗಿ ನನ್ನನ್ನು ಬಹುಸಂಖ್ಯಾತ ಎಂದೇ ಕರೆಯಬೇಕು ಎಂದು ಸಚಿವ ಜಾರ್ಜ್ ಹೇಳಿದರು. ರಾಜಕೀಯ ದುರ್ಲಾಭಕ್ಕಾಗಿ ಬಿಜೆಪಿಯವರು ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾನೂ ಕೂಡ ರಾಜಕೀಯವಾಗಿ ಅವರಿಗೆ ಉತ್ತರಿಸುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)