ಪ್ರಮುಖ ಸುದ್ದಿ

ವೇತನ ಬಾಕಿ ನೀಡಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ: ದೊಡ್ಡಸ್ವಾಮೇಗೌಡ 

ಪ್ರಮುಖ ಸುದ್ದಿ, ಕೆ.ಆರ್.ನಗರ, ಸೆ.೮: ತಾಲೂಕು ಕಾಂಗ್ರೆಸ್ ಮುಖಂಡರು ಮತ್ತು ನನ್ನ ಮನವಿಗೆ ಸ್ಪಂದಿಸಿ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ ನಾಲ್ಕು ವರ್ಷಗಳ ವೇತನ ಬಾಕಿ ೧೪.೭೦ ಕೋಟಿ ರೂ ಬಿಡುಗಡೆ  ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.

ಬಾಕಿ ವೇತನ ಬಿಡುಗಡೆ ಮಾಡಲು ಶ್ರಮಿಸಿದ್ದಕ್ಕಾಗಿ ನೌಕರರ ಸಂಘದ ವತಿಯಿಂದ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮೈಸೂರು ನಿವಾಸದಲ್ಲಿ ಕಾರ್ಖಾನೆಯ ಕಾರ್ಮಿಕರೊಂದಿಗೆ ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿ ಶೀಘ್ರದಲ್ಲಿಯೆ ವೇತನ ಬಾಕಿ ಕೊಡಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಏಳು ದಿನಗಳ ಅವಧಿಯಲ್ಲಿ ಕಾರ್ಮಿಕರ ವೇತನ ಪಾವತಿಗೆ ಆದೇಶ ಮಾಡಿದ ಸಿದ್ದರಾಮಯ್ಯನವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಈ ಹಿಂದೆ ಉತ್ತಮ ಸ್ಥಿತಿಯಲ್ಲಿದ್ದ ನೂರಾರು ಕೋಟಿ ರೂ ಬೆಲ ಬಾಳುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು  ಖಾಸಗಿಯವರಿಗೆ ಗುತ್ತಿಗೆಗೆ ನೀಡಿ ಆ ಸಂದರ್ಭದಲ್ಲಿ ಒಪ್ಪಂದ ಪತ್ರಕ್ಕೂ ಸಹಿ ಹಾಕಿಸಿಕೊಳ್ಳದೆ ಇಂದು ಅದರ ದುಸ್ಥಿತಿಗೆ ಮತ್ತು ಕಾರ್ಮಿಕರ ಸಂಕಷ್ಟಕ್ಕೆ ಕಾರಣರಾಗಿರುವವರು ನನ್ನಿಂದಲೆ ಅದರ ಉದ್ದಾರ ಸಾದ್ಯ ಎನ್ನುತ್ತಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಅವರನ್ನು ಟೀಕಿಸಿದ ದೊಡ್ಡಸ್ವಾಮೇಗೌಡ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಸರ್ಕಾರವೆ ಬರಬೇಕಾಯಿತು ಎಂದರು.

ಈ ವೇಳೆ ನೌಕರರ ಸಂಘದ ಅಧ್ಯಕ್ಷ ಹೆಚ್.ಎನ್.ಮೋಹನ್, ಎಪಿಎಂಸಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನಟರಾಜು, ವಕ್ತಾರ ಸೈಯದ್‌ಜಾಬೀರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಜಿ.ಎಂ.ಹೇಮಂತ್, ಕಾರ್ಖಾನೆಯ ನೌಕರರ ಸಂಘದ ಉಪಾಧ್ಯಕ್ಷ ಜಯದೇವ್, ಖಜಾಂಚಿ ಕ್ಷೇತ್ರಪಾಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: