ಕರ್ನಾಟಕ

ಗೋಣಿಕೊಪ್ಪ ಎಪಿಎಂಸಿ ಯಿಂದ ರೈತರಿಗೆ ಅನ್ಯಾಯ : ಶಿವುಮಾದಪ್ಪ ಆರೋಪ

ಮಡಿಕೇರಿ ಸೆ.8 : ವಿಯೆಟ್ನಾಂನಿಂದ ಆಮದಾಗುತ್ತಿರುವ ಕಾಳು ಮೆಣಸಿನ ಕಲಬೆರಕೆ ವ್ಯವಹಾರದಿಂದಾಗಿ ಕೊಡಗಿನ ರೈತರಿಗೆ ಅನ್ಯಾಯವಾಗುತ್ತಿದ್ದು, ಇದಕ್ಕೆ ಕಾರಣಕರ್ತರಾಗಿರುವ ಗೋಣಿಕೊಪ್ಪಲು ಎಪಿಎಂಸಿ ಆಡಳಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸೆ.11 ರಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಎಪಿಎಂಸಿಗೆ ಮುತ್ತಿಗೆ ಹಾಕಲಾಗುವುದೆಂದು ಪಕ್ಷದ ಜಿಲ್ಲಾಧ್ಯಕ್ಷರಾದ ಶಿವು ಮಾದಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಆಡಳಿತ ಮಂಡಳಿ ತನ್ನ ಲಾಭಕ್ಕಾಗಿ ಕಾಳು ಮೆಣಸಿನ ಆಮದಿಗೆ ಬೆಂಬಲ ನೀಡುತ್ತಿದೆÀಯೆಂದು ಆರೋಪಿಸಿದರು. ಸೆ.11 ರಂದು ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಎಪಿಎಂಸಿಗೆ ಮುತ್ತಿಗೆ ಹಾಕಲಾಗುವುದು. ಆಡಳಿತ ಮಂಡಳಿಯ ರಾಜೀನಾಮೆಗೆ ಒತ್ತಾಯಿಸುವುದಲ್ಲದೆ, ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಸಚಿವರಲ್ಲಿ ಮನವಿ ಮಾಡಲಾಗುವುದೆಂದರು.

ಕಾಳುಮೆಣಸಿನ ಬೆಲೆ ಕುಸಿತವಾಗಿದ್ದು, ಇದಕ್ಕೆ ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದೆ ಪ್ರಮುಖ ಕಾರಣವಾಗಿದೆ. ಎಪಿಎಂಸಿ ಆಡಳಿತ ಮಂಡಳಿಗೆ ಕೊಡಗಿನ ರೈತರ ಮೇಲೆ ಯಾವುದೇ ಕಾಳಜಿ ಇಲ್ಲವೆಂದು ಆರೋಪಿಸಿದ ಶಿವು ಮಾದಪ್ಪ, ಪ್ರತಿಭಟನೆಗೆ ರೈತರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ರಾಜ್ಯ ಸರ್ಕಾರ ನೀಡಿದ ಅನುದಾನದ ಕಾಮಗಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರ ಮೂಲಕ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಅರ್ಥಹೀನವಾಗಿದ್ದು, ಅವರ ನಿರ್ಲಕ್ಷ್ಯ ಮನೋಭಾವವನ್ನೆ ನಾವು ಅನುಸರಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು. ನನ್ನ ಜಿಪಂ ಕ್ಷೇತ್ರದ ಕಾಮಗಾರಿಗೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಆದರೆ, ನನ್ನ ಗಮನಕ್ಕೆ ತಾರದೆ, ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಅವರು ಹಾಕಿದ ನೀತಿಯನ್ನೆ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಶಿವು ಮಾದಪ್ಪ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ನೆರವಂಡ ಉಮೇಶ್ ಮಾತನಾಡಿ, ದಲ್ಲಾಳಿಗಳ ಕೈಯಿಂದ ರೈತರಿಗಾಗುವ ಅನ್ಯಾಯವನ್ನು ತಪ್ಪಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ರಚಿಸಲಾಗಿದೆ. ಆದರೆ, ಗೋಣಿಕೊಪ್ಪ ಎಪಿಎಂಸಿ ಆಡಳಿತ ಮಂಡಳಿ ದಲ್ಲಾಳಿಗಳ ಪರ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಕಾಳು ಮೆಣಸನ್ನು ಬೆಂಗಳೂರಿನಲ್ಲೆ ಮಾರಾಟ ಮಾಡಬಹುದಾಗಿತ್ತು. ಕೊಡಗಿನಲ್ಲಿ ಈ ವ್ಯವಹಾರವನ್ನು ನಡೆಸುವ ಉದ್ದೇಶ ಏನಿದೆ ಎಂದು ನೆರವಂಡ ಉಮೇಶ್ ಪ್ರಶ್ನಿಸಿದರು.ಕಾಳು ಮೆಣಸು ಆಮದಿನಿಂದ ಸ್ಥಳೀಯ ರೈತರ ಹಿತಕ್ಕೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: