ಕರ್ನಾಟಕ

ಬೆಂಗಳೂರಿನಲ್ಲಿ ಭಾರೀ ಮಳೆಗೆ ನಾಲ್ವರು ಸಾವು

ಬೆಂಗಳೂರು,ಸೆ.9: ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಕಾರಿನ ಮೇಲೆ ಮರ ಬಿದ್ದ ಪರಿಣಾಮ ದಂಪತಿ ಸೇರಿದಂತೆ ಮೂರು ಮಂದಿ ಸಾವನ್ನಪ್ಪಿದ್ದರೆ,  ಕಾಲುವೆಯಲ್ಲಿ ಕೊಚ್ಚಿ ಹೋಗಿ ಒಬ್ಬ ಯುವಕ ಮೃತಪಟ್ಟಿದ್ದಾನೆ.

ಬೆಂಗಳೂರು ಮಿನರ್ವ ವೃತ್ತದ ಸಮೀಪ ಡಿಸ್ಪೆನ್ಸರಿ ರಸ್ತೆಯಲ್ಲಿ ಕಾರಿನ ಮೇಲೆ ನೀಲಗಿರಿ ಮರ ಬಿದ್ದಿದ್ದರಿಂದ, ಒಳಗಿದ್ದ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಸುಂಕದಕಟ್ಟೆಯ ರಮೇಶ್ (42), ಅವರ ಪತ್ನಿ ಭಾರತಿ (38) ಹಾಗೂ ಸಂಬಂಧಿ ಜಗದೀಶ್ (42) ಎಂದು ಗುರುತಿಸಲಾಗಿದೆ. ರಮೇಶ್ ಅವರ ಮಗ ಲೋಹಿತ್ (10) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರವನ್ನು ತೆರವುಗೊಳಿಸಿರುವ ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರು, ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತಪಟ್ಟ ರಮೇಶ್ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯೊಂದರಲ್ಲಿ ವ್ಯವಸ್ಥಾ‍ಪ‍ಕರಾಗಿದ್ದರು. ಅದೇ ಕಾರ್ಖಾನೆಯಲ್ಲಿ ಜಗದೀಶ್ ಟೈಲರ್ ಆಗಿದ್ದರು. ಭಾರತಿ ಗೃಹರಕ್ಷಕದಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕಲಾಸಿಪಾಳ್ಯ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರು ದುರಸ್ತಿಗಾಗಿ ಕಲಾಸಿಪಾಳ್ಯದ ಗ್ಯಾರೇಜ್ ಗೆ ಬಂದಿದ್ದ ರಮೇಶ್ ರಾತ್ರಿ 7 ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅದೇ ವೇಳೆ ಮಳೆ ಜೋರಾಗಿ ಬರುತ್ತಿದ್ದರಿಂದ ಮರದ ಕೆಳಗೆ ಕಾರು ನಿಲ್ಲಿಸಿದ್ದರು. ಜೋರು ಮಳೆ ಮತ್ತು ಗಾಳಿಯಿಂದಾಗಿ  ಕಾರಿನ ಮೇಲೆ ಮರ ಬಿದ್ದ  ಪರಿಣಾಮ ಕಾರು ಜಖಂಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಸಹಾಯಕ್ಕೆ ಬಂದ ಸ್ಥಳೀಯರು,  ಸೀಟಿನ ಕೆಳಗೆ ಸಿಲುಕಿದ್ದ ಲೋಹಿತ್ ನನ್ನು ರಕ್ಷಿಸಿ ಹೊರಗೆ ಕರೆತಂದಿದ್ದಾರೆ.

ಇನ್ನು ಮಳೆಯ ಕಾರಣದಿಂದ ಗಾಳಿ ಜೋರಾಗಿ ಬೀಸಿದ್ದರಿಂದ ಜೆ.ಪಿ.ನಗರದ ಎರಡು ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಶಿವಾನಂದ ವೃತ್ತದ ಕೆಳ ಸೇತುವೆಯಲ್ಲಿ ನೀರು ನಿಂತುಕೊಂಡು ರಾತ್ರಿ ಬಹುಹೊತ್ತಿನವರೆಗೆ ವಾಹನಗಳ ಸಂಚಾರ ಬಂದ್ ಆಯಿತು. ಮೆಜೆಸ್ಟಿಕ್, ನೃಪತುಂಗ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಂಡುಬಂತು. ನಗರದಲ್ಲಿ ಸರಾಸರಿ 3 ಮಿ.ಮೀ ಮಳೆಯಾಗಿದೆ. ಸಂಪಂಗಿರಾಮನಗರ 17.5 ಮಿ.ಮೀ, ಆನೇಕಲ್ 11 ಮಿ.ಮೀ, ರಾಜಾಜಿನಗರ 19 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: