ಮೈಸೂರುಸಿಟಿ ವಿಶೇಷ

ಸಂತ ಫಿಲೊಮಿನಾ ಚರ್ಚ್‍ಗೆ ಇನ್ನೂ ಒಂದು ವರ್ಷ ಪ್ರವೇಶವಿಲ್ಲ…

ಮೈಸೂರಿನ ವಿಶ್ವವಿಖ್ಯಾತ ಸಂತ ಫಿಲೊಮಿನಾ ಚರ್ಚ್ ನೋಡುವ ಭಾಗ್ಯ ಇನ್ನು ಒಂದು ವರ್ಷ ಪ್ರವಾಸಿಗರಿಗೆ ಸಿಗೋದಿಲ್ಲ. ಚರ್ಚ್ ಅನ್ನು ದುರಸ್ತಿಗೊಳಿಸುತ್ತಿರುವ ಕಾರಣ ಚರ್ಚ್ ನೋಡುವ ಕನಸು ನನಸಾಗಲು ಇನ್ನು ಒಂದು ವರ್ಷ ಕಾಯಬೇಕಾದ ಅವಶ್ಯಕತೆ ಇದೆ. ಈಗಾಗಗಲೇ ಚರ್ಚ್ ಕಾಮಗಾರಿ ಪ್ರಾರಂಭವಾಗಿ ಬರೋಬ್ಬರಿ 6 ತಿಂಗಳೇ ಕಳೆದಿವೆ. 18 ತಿಂಗಳ ಗುತ್ತಿಗೆ ಪಡೆದುಕೊಂಡಿರುವ ಮುಂಬೈನ ಹೆಸರಾಂತ ಪುರಾತನ ಕಟ್ಟಡಗಳ ಪುನರ್ ನಿರ್ಮಾಣ ಸಂಸ್ಥೆಯಾದ ಸವಾನಿ ಗ್ರೂಪ್ಸ್ ಆಫ್ ಕಂಪನಿಯು ಚರ್ಚ್ನ ಕಾಯಕಲ್ಪದ ಜವಾಬ್ದಾರಿ ಹೊತ್ತಿದೆ. ಪುರಾತತ್ವ ಇಲಾಖೆ ಸಹಯೋಗದೊಂದಿದೆ ಈ ನವೀಕರಣ ಕಾಮಗಾರಿ ನಡೆಯುತ್ತಿದೆ.

ಪ್ರಾರ್ಥನೆಗೆ ಪರ್ಯಾಯ ವ್ಯವಸ್ಥೆ:

ಚರ್ಚ್‍ಗೆ ಆಗಮಿಸುವ ಪ್ರವಾಸಿಗರಿಗೆ ನಿರಾಸೆಯಾಗದಂತೆ ಚರ್ಚ್ನ ಆಡಳಿತ ಮಂಡಳಿಯು ಚರ್ಚ್‍ನ ಹೊರಗೆ ಪ್ರತ್ಯೇಕ ಕೊಠಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಸಿದೆ. ಮಾತ್ರವಲ್ಲ, ಚರ್ಚ್ ಒಳಗೆ ಹೊಗಲು ಚರ್ಚ್‍ನ ಹಿಂದಿನ ದ್ವಾರದಿಂದ ಅನುವು ಮಾಡಿಕೊಡಲಾಗಿದೆ. ಆದರೆ ಚರ್ಚ್ ಮುಂದಿನ ದ್ವಾರ ಮಾತ್ರ ಕಾಮಗಾರಿ ಮುಗಿಯುವವರೆಗೂ ಬಂದ್ ಆಗಿರಲಿದೆ. ವಾರಕ್ಕೊಮ್ಮೆ ನಡೆಯುವ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಚರ್ಚ್ ಒಳಗಿರುವ ವಿಶೇಷ ಕೊಠಡಿಯಲ್ಲೇ ಸಲ್ಲಿಸಲಾಗುತ್ತಿದೆ ಎಂದು ‘ಸಿಟಿಟುಡೆ’ಯೊಂದಿಗೆ ಮಾತನಾಡಿದ ಚರ್ಚ್ ಆಡಳಿತ ಮಂಡಳಿಯ ಫ್ರಾನ್ಸಿಸ್ ಅವರು ತಿಳಿಸಿದ್ದಾರೆ.

7.80 ಕೋಟಿ ವೆಚ್ಚದ ಕಾಮಗಾರಿ:

ಇದೇ ಮೊದಲ ಬಾರಿಗೆ ದೊಡ್ದ ಮೊತ್ತದಲ್ಲಿ ಚರ್ಚ್ನ ದುರಸ್ತಿ ಕಾರ್ಯ ನಡೆಯುತ್ತಿದೆ. ಹೊರಗಿನ ಮೇಲ್ಛಾವಣಿ ಮಾತ್ರವಲ್ಲದೇ ಒಳಗಿನ ಆವರಣದಲ್ಲಿ ಕೂಡ ನವೀಕರಣ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ರಾಜ್ಯ ಸರ್ಕಾರದ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಈ ಯೋಜನೆಗೆ ಎರಡು ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಪ್ರವಾಸೋದ್ಯಮ ಇಲಾಖೆ ಕೂಡ 50 ಲಕ್ಷ ರೂ. ನೀಡಿ ಕಾಮಗಾರಿಗೆ ಸಹಕಾರ ನೀಡಿದೆ. ಕಾಮಗಾರಿ ವೆಚ್ಚ ಹೆಚ್ಚಾದ ಕಾರಣ ಮತ್ತೊಮ್ಮೆ ಚರ್ಚ್ನ ಮುಖ್ಯಸ್ಥರು ಸರ್ಕಾರದೊಡನೆ ಮಾತನಾಡಿ, ಮತ್ತಷ್ಟು ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಇವರ ಮನವಿಯನ್ನ ಪುರಸ್ಕರಿಸಿದ ಸರ್ಕಾರ, ಎರಡನೇ ಬಾರಿಗೆ 2 ಕೋಟಿ 70 ಲಕ್ಷ ಹಣ ನೀಡಿ, ಒಟ್ಟಾರೆ 5 ಕೋಟಿ 20 ಲಕ್ಷ ಹಣವನ್ನು ರಾಜ್ಯ ಸರ್ಕಾರವೇ ನೀಡಿದಂತಾಗಿದೆ. ಆದರೆ ಕಾಮಗಾರಿ ವೆಚ್ಚ ಅಂದಾಜು 7 ಕೋಟಿ 80 ಲಕ್ಷ ರೂ. ತಲುಪಿದ ಆದ ಕಾರಣ ಚರ್ಚ್ನ ಆಡಳಿತ ಮಂಡಳಿ ಇದೀಗ ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಲು ನಿರ್ಧರಿಸಿದೆ. ಮಾತ್ರವಲ್ಲ 25 ಸಾವಿರಕ್ಕೂ ಮೇಲ್ಪಟ್ಟು ದೇಣಿಗೆ ನೀಡಿದವರ ಹೆಸರನ್ನ ಚರ್ಚ್‍ನ ನಾಮಫಲಕದಲ್ಲಿ ಕೆತ್ತಿಸಲು ನಿರ್ಧಾರ ಮಾಡಿದೆ.

ಈ ಚರ್ಚ್‍ಗಿದೆ ಇತಿಹಾಸ:

ಪ್ರಪಂಚದಾದ್ಯಂತ ಮೈಸೂರಿನ ಹೆಸರಿನೊಂದಿಗೆ ಕೇಳಿಬರುವ ಈ ಪ್ರಖ್ಯಾತ ಸಂತ ಫಿಲೋಮಿನಾ ಚರ್ಚ್‍ ಅನ್ನು 1933 ರಿಂದ 1941 ರ ವೇಳೆಯಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶ್ರಯದಲ್ಲಿ ನಿರ್ಮಾಣ ಮಾಡಲಾಗಿತ್ತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಚರ್ಚ್ನ ಎತ್ತರ 187 ಅಡಿಗಳಾಗಿದ್ದು, ಉದ್ದ – 165 ಅಡಿಗಳಾಗಿವೆ. ಆದಷ್ಟು ಬೇಗ ಕಾಮಗಾರಿ ಮುಗಿದು, ಪ್ರವಾಸಿಗರಿಗೆ ನವೀಕೃತ ಚರ್ಚ್ ನೋಡುವ ಭಾಗ್ಯ ಸಿಗಲಿ ಎಂಬುದು ನಮ್ಮ ಆಶಯ.

– ಸುರೇಶ್  ಎನ್.

90591116

Leave a Reply

comments

Related Articles

error: