ಕರ್ನಾಟಕಪ್ರಮುಖ ಸುದ್ದಿ

ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಬೇಡ: ಸಚಿವೆ ಗೀತಾಮಹದೇವಪ್ರಸಾದ್

ರಾಜ್ಯ(ಚಾಮರಾಜನಗರ) ಸೆ. 9: – ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹಮಾಡದೇ ಅವರ ಶೈಕಣಿಕ ಅಭಿವೃದ್ಧಿಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವೆ ಡಾ. ಗೀತಾಮಹದೇವಪ್ರಸಾದ್ ಸಲಹೆ ನೀಡಿದರು.

ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಕನಕ ಸಮುದಾಯ ಭವನ ಉದ್ಘಾಟನೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವುದರಿಂದ ಅವರ ಆರೋಗ್ಯ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳನ್ನು ಕಷ್ಟಕ್ಕೆ ದೂಡದೆ ಅವರ ವ್ಯಾಸಂಗಕ್ಕೆ ಹೆಚ್ಚಿನ ಆದ್ಯತೆ ಕೊಡಿ. ಹೆಚ್ಚು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಿದ್ಯಾಸಂಸ್ಥೆಗಳು ಇವೆ. ಉಸ್ತುವಾರಿ ಸಚಿವರಾಗಿದ್ದ ಮಹದೇವಪ್ರಸಾದ್ ಅವರ ಅವಧಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಆರಂಭವಾಗಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಜಿ.ಟಿ.ಟಿ.ಸಿ, ಐ.ಟಿ.ಐ ಕಾಲೇಜು ಸೌಲಭ್ಯವಿದೆ. ಇನ್ನಿತರ ಶಾಲಾಕಾಲೇಜುಗಳು ಸಹ ಇದ್ದು, ವಿದ್ಯಾಭ್ಯಾಸಕ್ಕೆ ಅನುಕೂಲವಾಗಿವೆ. ಈ ಎಲ್ಲ ಸೌಕರ್ಯವನ್ನು ಬಳಸಿಕೊಳ್ಳಬೇಕೆಂದು ನುಡಿದರು. ಜಿಲ್ಲೆಯಲ್ಲಿ ವಿವಿಧ ವರ್ಗಗಳ ಜನತೆಗೆ ಅಗತ್ಯವಿರುವ ಸಮುದಾಯ ಭವನಗಳ ನಿಮಾಣ ಕಾರ್ಯ ನಡೆಯುತ್ತಿದೆ. ಒಟ್ಟು 15 ಸಮುದಾಯ ಭವನಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಈ ಎಲ್ಲ ಭವನಗಳ ಕಾಮಗಾರಿ ಕಾಲಮಿತಿಯೊಳಗೆ ಮುಗಿಯಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಎಚ್.ಎಸ್. ನಂಜಪ್ಪ ಅವರು ಜಿಲ್ಲೆ ಹಾಗೂ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮಹದೇವಪ್ರಸಾದ್ ಅವರು ಅವಿರತವಾಗಿ ಶ್ರಮಿಸಿದ್ದರು. ನೂತನ ಸಚಿವರಿಗೂ ಎಲ್ಲ ಬಗೆಯ ಸಹಕಾರ ನೀಡಲಿದ್ದು, ಜಿಲ್ಲೆಯ ಬೆಳವಣಿಗೆಗೆ ಪೂರಕವಾಗಿ ಎಲ್ಲರೂ ಸ್ಪಂದಿಸಲಿದ್ದಾರೆ ಎಂದರು. ತಾಲೂಕು ಪಂಚಾಯತ್ ಅಧ್ಯಕ್ಷ ಎಚ್.ಎನ್. ನಟೇಶ್, ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ, ರತ್ನಮ್ಮ, ಹಾಲು ಒಕ್ಕೂಟ ನಿರ್ದೇಶಕ ಡಿ. ಮಾದಪ್ಪ, ತಾ.ಪಂ. ಸದಸ್ಯ ಸುಮಿತ್ರಮಹೇಶ್, ಮಧುಶೇಖರ್, ಗ್ರಾಮಪಂಚಾಯಿತಿ ಉಪಾಧ್ಯಕ್ಷ ಶಿವಮ್ಮ, ಎ.ಪಿ.ಎಂ.ಸಿ ಅಧ್ಯಕ್ಷ ಮಲ್ಲಣ್ಣ ಇತರರು ಉಪಸ್ಥಿತರಿದ್ದರು. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: