ಕರ್ನಾಟಕಪ್ರಮುಖ ಸುದ್ದಿ

ಲಿಂಗಾಯತ ಧರ್ಮ ಹೋರಾಟ : ಜಾಮದಾರ್‍, ಎಂಬಿ ಪಾಟೀಲ್‍ಗೆ ಪೊಲೀಸ್ ಭದ್ರತೆ

ಬೆಂಗಳೂರು, ಸೆ.9 : ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ಪಡೆಯಲು ನಡೆಸುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ‘ವೈ’ ಶ್ರೇಣಿಯ ಭದ್ರತೆ ಒದಗಿಸಿದೆ. ಇದರಂತೆ ಇನ್ನುಮುಂದೆ ಜಾಮದಾರ ಅವರ ಜತೆ ಸದಾ ಇಬ್ಬರು ಗನ್‍ಮ್ಯಾನ್‍ಗಳು ಇರಲಿದ್ದಾರೆ.

ಇದರ ಜೊತೆಗೆ ಲಿಂಗಾಯತ ಧರ್ಮದ ಮುಂಚೂಣಿಯಲ್ಲಿರುವ ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೂ ಕೆಲವು ಪಟ್ಟಭದ್ರ ಶಕ್ತಿಗಳಿಂದ ಜೀವ ಬೆದರಿಕೆ ಇದೆ ಎಂದು ಗುಪ್ತದಳ ವರದಿ ನೀಡಿರುವುದರಿಂದ ಈ ನಾಲ್ವರಿಗೂ ಭದ್ರತೆ ಒದಗಿಸಲು ಗೃಹ ಇಲಾಖೆ ಮುಂದಾಗಿದೆ.

ಸಚಿವ ವಿನಯ್ ಕುಲಕರ್ಣಿ ಅವರಿಗೆ ಬೇರೆ ಪ್ರಕರಣವೊಂದರಲ್ಲಿ ಜೀವ ಬೆದರಿಕೆ ಇದ್ದುದರಿಂದ ಈಗಾಗಲೇ ‘ಝಡ್’ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ಇದೀಗ ಡಾ.ಜಾಮದಾರ್ ಅವರಿಗೆ ‘ವೈ’ ಶ್ರೇಣಿ ಭದ್ರತೆ ನೀಡಲಾಗಿದೆ. ಎಂ.ಬಿ.ಪಾಟೀಲ್ ಮತ್ತು ಶಾಸಕ ಹೊರಟ್ಟಿ ಭದ್ರತೆ ಪಡೆಯಲು ನಿರಾಕರಿಸಿದ್ದಾರೆ. ಆದಾಗ್ಯೂ ರಾಜ್ಯ ಸರ್ಕಾರವು ಸಚಿವ ಎಂ.ಬಿ. ಪಾಟೀಲ್ ಅವರಿಗೆ ಒಬ್ಬ ಗನ್‍ಮ್ಯಾನ್‍ ಒದಗಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಡಾ.ಜಾಮದಾರ್ ಅವರಿಗೆ ಜೀವ ಬೆದರಿಕೆ ಇದೆ ಎಂದು 20 ದಿನಗಳ ಹಿಂದೆಯೇ ಗುಪ್ತದಳ ಎಚ್ಚರಿಕೆ ನೀಡಿತ್ತು. ಈ ಕಾರಣದಿಂದ ಬೆಳಗಾವಿಯಲ್ಲಿ ನಡೆದ ಲಿಂಗಾಯತ ಸಮಾವೇಶದ ವೇಳೆ ಬೆಳಗಾವಿ ಪೊಲೀಸರು ಒಬ್ಬ ಗನ್‍ಮ್ಯಾನ್ ಒದಗಿಸಿದ್ದರು. ಕಳೆದ ಮಂಗಳವಾರ ರಾತ್ರಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ ನಂತರ ಜಾಮದಾರ್ ಅವರಿಗೆ ತೀವ್ರ ತರದ ಜೀವ ಬೆದರಿಕೆ ಇದೆ ಎಂದು ಗುಪ್ತಚರ ದಳ ಮತ್ತೊಮ್ಮೆ ವರದಿ ನೀಡಿದ್ದರಿಂದ ‘ವೈ’ ಶ್ರೇಣಿಯ ಭದ್ರತೆ ಒದಗಿಸಿಲಾಗಿದೆ.

(ಎನ್.ಬಿ)

Leave a Reply

comments

Related Articles

error: