ಮೈಸೂರುಸಿಟಿ ವಿಶೇಷ

ಮೈಸೂರಿನ ಬಹುತೇಕ ಆಸ್ಪತ್ರೆಗಳ ಸುರಕ್ಷತಾ ಕ್ರಮಗಳು ಐಸಿಯುನಲ್ಲಿ…!

ಇತ್ತೀಚಿಗೆ ಒಡಿಶಾದ ಆಸ್ಪತ್ರೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಡೀ ಆಸ್ಪತ್ರೆಗೆ ಬೆಂಕಿ ಹಬ್ಬಿ 22 ಮಂದಿ ಉಸಿರುಗಟ್ಟಿ ಮೃತಪಟ್ಟಿರೋ ಘಟನೆ ಇತ್ತೀಚಿಗಷ್ಟೇ ನಡೆದಿತ್ತು. ಈ ಹಿಂದೆಯು ಹಲವು ಆಸ್ಪತ್ರೆಗಳಲ್ಲಿ ಈ ರೀತಿಯ ಪ್ರಕರಣಗಳು ಕೂಡ ವರದಿಯಾಗಿವೆ. ಅಗ್ನಿ ದುರಂತದ ಸುದ್ದಿ ಕೇಳಿದಾಗ ಬೇರೆಲ್ಲೋ ಅನಾಹುತವಾಗಿದೆ ನಾವು ಸೇಫ್ ಎಂದೇ ಎಲ್ಲರೂ ಭಾವಿಸಿ ಸುಮ್ಮನಾಗುವವರೇ ಹೆಚ್ಚು. ನಮ್ಮ ಕಟ್ಟಡದಲ್ಲಿ ಈ ರೀತಿಯ ಅನಾಹುತವಾಗದಂತೆ ಹೇಗೆ ತಡೆಗಟ್ಟಬಹುದು ಎಂದು ಯಾರೂ ಕೂಡ ಒಂದು ಕ್ಷಣ ಕೂಡ ಚಿಂತಿಸಲ್ಲ. ಅಗ್ನಿಶಾಮಕ ದಳದ ಮೇಲೆ ಎಲ್ಲ ಭಾರ ಹಾಕಿ ನೆಮ್ಮದಿಯ ನಿದ್ರೆ ಮಾಡುತ್ತಾರೆ. ಇನ್ನು, ಒಂದು ಆಸ್ಪತ್ರೆಗೆ ಲೈಸೆನ್ಸ್ ಕೋಡೋ ಸಮಯದಲ್ಲಿ ಕಾಟಾಚಾರಕ್ಕೆ ಪರಿಶೀಲನೆ ನಡೆಸೋ ಅಧಿಕಾರಿಗಳು ಮಾಡುವ ಅವಾಂತರದಿಂದ ಬಲಿಪಶುಗಳಾಗುವುದು ಮಾತ್ರ ರೋಗಿಗಳು.

ಈ ಹಿಂದೆಯೂ ಕೋಲ್ಕತ್ತಾದ ಆಮ್ರಿ ಆಸ್ಪತ್ರೆ, ಮುಂಬೈನ ಗೋಕುಲ್ ಮತ್ತು ಕೋಲ್ಕತ್ತಾದ ಮುರ್ಶಿದಾಬಾದ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡಗಳು ನಡೆದಿವೆ. ಈ ಘಟನೆಯಲ್ಲಿ ಗಮನಿಸಬೇಕಾದ ಸಾಮಾನ್ಯ ಅಂಶವೆಂದರೆ ಇಲ್ಲಿ ಯಾರೂ ಬೆಂಕಿ ತಗುಲಿ ಸುಟ್ಟ ಗಾಯಗಳಿಂದ ಮೃತಪಟ್ಟಿಲ್ಲ. ಹೊಗೆ ತುಂಬಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇದಕ್ಕೆ ಕಾರಣ ಆ ಆಸ್ಪತ್ರೆಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಮತ್ತು ರೋಗಿಗಳು ಓಡಿ ಪಾರಾಗಲು ಯಾವುದೇ ಕಾರಿಡಾರ್ ಗಳನ್ನು ಮಾಡದಿರುವುದು.

ಮೈಸೂರಿನಲ್ಲಿರುವ ಆಸ್ಪತ್ರೆಗಳೆಷ್ಟು ಸೇಫ್ ಎಂದು ಕೆಲ ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಿದಾಗ ಬಹಳಷ್ಟು ಆಸ್ಪತ್ರೆಗಳಲ್ಲಿ ನಾಮ್‍ಕೇವಾಸ್ತೆ ಅಗ್ನಿ ನಂದಿಸುವ ಉಪಕರಣಗಳನ್ನು ಅಳವಡಿಸಿರುವುದು ಕಂಡುಬಂತು. ಉಪಕರಣಗಳನ್ನು ರಿಫಿಲ್ ಮಾಡಲು ಆಸ್ಪತ್ರೆ ಮಂಡಳಿ ಮರೆತಂತಿತ್ತು. ಕಟ್ಟಡಗಳು ಕೂಡ ಅಷ್ಟೇ ಒತ್ತೊತ್ತಾಗಿದ್ದು, ಮೆಟ್ಟಿಲು ತುಂಬಾ ಇಕ್ಕಟ್ಟಾಗಿವೆ.

ಒಡಿಶಾದಲ್ಲಿ ನಡೆದ ಅಗ್ನಿ ಅವಘಡದಿಂದ ಎಚ್ಚೆತ್ತ ತಮಿಳುನಾಡು ಸರಕಾರ ಮುಂದೆ ನಿರ್ಮಾಣವಾಗುವ ಪ್ರತಿಯೊಂದು ಆಸ್ಪತ್ರೆಯಲ್ಲೂ ಫೈರ್‍ ಲಿಫ್ಟ್ ಮತ್ತು ರಾಂಪ್‍ಗಳನ್ನು ಕಡ್ಡಾಯವಾಗಿ ಮಾಡಲೇಬೇಕೆಂದು ಆದೇಶ ಹೊರಡಿಸಿದೆ. ಅಲ್ಲದೆ, ಪ್ರತಿ ಆರು ತಿಂಗಳಿಗೊಂದು ಬಾರಿ ಆಸ್ಪತ್ರೆ ಸಿಬ್ಬಂದಿಗೆ ಅಣಕು ಪ್ರದರ್ಶನದ ಮೂಲಕ ತರಬೇತಿ ನೀಡುವುದು ಮತ್ತು ಉಪಕರಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೋ ಎಂದು ಪರಿಶೀಲಿಸುವುದು ಕಡ್ಡಾಯ ಎಂದು ಸೂಚಿಸಿದೆ. ಆದರೆ, ಕರ್ನಾಟಕ ಸರಕಾರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಅನಾಹುತ ನಡೆದ ಮೇಲಷ್ಟೇ ಕ್ರಮ ಕೈಗೊಳ್ಳಲು ಕಾದು ಕುಳಿತಂದಿದೆ.

ಪ್ರಾದೇಶಿಕ ಅಗ್ನಿಶಾಮಕಾಧಿಕಾರಿ ಈಶ್ವರ ನಾಯ್ಕ ಅವರನ್ನು ‘ಸಿಟಿಟುಡೆ’ ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು, ಆಸ್ಪತ್ರೆಗಳು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿಯಮವೇ ಇದೆ. ಇನ್ನೂ ಕೆಲವು ಆಸ್ಪತ್ರೆಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಬಗ್ಗೆ ಈಗಾಗಲೇ ನೋಟಿಸ್ ಕಳುಹಿಸಿದ್ದೇವೆ. ಅವರಿಗೆ ಒಂದು ವಾರ ಸಮಯ ನೀಡಲಾಗಿದೆ. ಅಷ್ಟರಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಮೈಸೂರಲ್ಲಿರುವ ಬಹುತೇಕ ಆಸ್ಪತ್ರೆಗಳಲ್ಲಿ ಯಾವುದೇ ಅಗ್ನಿ ನಂದಿಸುವ ಉಪಕರಣಗಳಾಗಲಿ, ಅನಾಹುತ ನಡೆದ ಸಂದರ್ಭದಲ್ಲಿ ರೋಗಿಗಳು ಯಾವ ಕಡೆ ಚಲಿಸಬೇಕೆನ್ನುವ ನಿರ್ದೇಶನಗಳು, ಫೈರ್‍ ಅಲಾರ್ಮ್‍ಗಳಾಗಲಿ ಇಲ್ಲ. ಒಡಿಶಾದಲ್ಲಿ ನಡೆದ ದುರಂತ ಮೈಸೂರಿನಲ್ಲಿ ನಡೆದರೂ ಅಚ್ಚರಿಯೇನಿಲ್ಲ. ಯಾವುದಾದರೂ ಅವಘಡ ನಡೆದಾಗ ಎಚ್ಚೆತ್ತುಕೊಳ್ಳುವ ಬದಲು ಮೊದಲೇ ಈ ಬಗ್ಗೆ ಗಮನ ಹರಿಸಿದರೆಸೂಕ್ತ ಎಂದು ಕೊಲಂಬಿಯಾ ಆಸ್ಪತ್ರೆಯ ಡಾ.ಮೋಹನ್‍ ತಿಳಿಸಿದ್ದಾರೆ.

fire-story-2

ಮೈಸೂರಿನ ಅತೀ ದೊಡ್ಡ ಆಸ್ಪತ್ರೆಯಾದ ಜೆಎಸ್‍ಎಸ್‍ ಆಸ್ಪತ್ರೆಯ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಬೆನ್ನೂರು ಮಾತನಾಡಿ, ನಮ್ಮಲ್ಲಿ ಎಲ್ಲ ಅಗ್ನಿ ನಂದಿಸುವ ಉಪಕರಣಗಳು ಕೂಡ ಇವೆ. ಅಲ್ಲದೆ, ಎಲ್ಲ ಸಿಬ್ಬಂದಿಗೂ ಅನಾಹುತವಾದ ಸಮಯದಲ್ಲಿ ಗೊಂದಲಕ್ಕೀಡಾಗದಂತೆ ಅಣಕು ಪ್ರದರ್ಶನಗಳನ್ನು ನೀಡಿ ತರಬೇತಿ ನೀಡುತ್ತೇವೆ. ಅಗ್ನಿ ಅವಘಡ ಸಂಭವಿಸಿದರೂ ರೋಗಿಗಳು ಗಾಬರಿಯಾಗದೆ ಒಂದು ಬ್ಲಾಕಿನಿಂದ ಇನ್ನೊಂದು ಬ್ಲಾಕಿಗೆ ಸೇಫಾಗಿ ಸೇರಬಹುದು. ದೊಡ್ಡ ಕಾರಿಡಾರ್‍ ಗಳಿವೆ. ದೇಶದಲ್ಲೇ ಎರಡು ಫೈರ್‍ ಲಿಫ್ಟ್ ಹೊಂದಿರುವ ಆಸ್ಪತ್ರೆ ಜೆಎಸ್‍ಎಸ್‍ ಒಂದೇ. ಸಣ್ಣ ಬೆಂಕಿ ಕಾಣಿಸಿಕೊಂಡರೂ ನಿಮಿಷದೊಳಗೆ ಹೋಗಿ ನಂದಿಸುವ ಎಲ್ಲ ಸಿದ್ಧತೆಗಳು ನಮ್ಮಲ್ಲಿವೆ.

ಆಸ್ಪತ್ರೆಗಳಲ್ಲಿ ಹೆಚ್ಚು ಶಾಖ ಹೊರಹಾಕುವ ಉಪಕರಣಗಳು, ದಹನಶೀಲ ಅನಿಲ, ಇಂಧನ, ರಾಸಾಯನಿಕಗಳು, ವಿದ್ಯುತ್ ತಂತಿಗಳು ಬಹು ಬೇಗ ಅಪಾಯಕ್ಕೆ ಆಹ್ವಾನ ನೀಡುತ್ತಾವದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅವಶ‍್ಯಕ. ಬಹುತೇಕ ಆಸ್ಪತ್ರೆಗಳು ಬಂಡವಾಳದ ಕೊರತೆಯಿಂದ ಉಪಕರಣಗಳನ್ನು ಖರೀದಿಸಲು ಹಿಂದೇಟು ಹಾಕುತ್ತವೆ. ಎಲ್ಲ ಫೈರ್‍ ಎಕ್ವಿಪ್‍ಮೆಂಟ್‍ ತೆಗೆದುಕೊಳ್ಳುವುದು ಅಸಾಧ್ಯವಾದರೂ, ರಾಂಪ್‍ಗಳನ್ನು ನಿರ್ಮಿಸಬಹುದು. ಮೈಸೂರಿನ 7-8 ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಉಳಿದ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಅಳವಡಿಸಿಲ್ಲ. ರೋಗಿಗಳು ಆಸ್ಪತ್ರೆಯಲ್ಲಿ ನಮ್ಮ ಜೀವ ಉಳಿಯುತ್ತದೆ ಎಂದು ಬರುತ್ತಾರೆ. ಈ ರೀತಿಯ ಅನಾಹುತಗಳಿಗೆ ಎಡೆಮಾಡಿ ಅವರ ಜೀವ ತೆಗೆಯುವ ಕೆಲಸವನ್ನು ಆಸ್ಪತ್ರೆಗಳು ಮಾಡಬಾರದು ಎಂದು ಹೇಳಿದರು.

ಸಂಧ್ಯಾ ಎನ್.ಎ.

Leave a Reply

comments

Related Articles

error: