ಕರ್ನಾಟಕಪ್ರಮುಖ ಸುದ್ದಿಮೈಸೂರು

ದೊಡ್ಡ ಮನಸ್ಸಿನ ಸಣ್ಣ ಜನರಿಂದ ಉತ್ತಮ ಸಮಾಜ ನಿರ್ಮಾಣ : ಬಿ.ಟಿ.ಲಲಿತಾ ನಾಯಕ್

ದಲಿತ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ದಲಿತ ಸಾಹಿತ್ಯ ಸಮಾವೇಶದಲ್ಲಿ ಸಮಯದ  ಶಿಸ್ತನ್ನು ಪಾಲಿಸಿದಾಗ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕುವೆಂಪು ಅವರಿಗೆ ಗೌರವ ಸಲ್ಲಿಸಿದಂತಾಗುವುದು ಎಂದು ಮಾಜಿ ಸಚಿವೆ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.

ಅವರು, ಇಂದು(ಅ.27) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮಂಡ್ಯದ ಬೆಳಕು ಸಮಾಜದ ಸಂಯುಕ್ತಾಶ್ರಯದಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕುವೆಂಪು ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀಸಭಾಂಗಣದಲ್ಲಿ ಅ.27 ಮತ್ತು 28ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ದಲಿತ ಮಹಿಳಾ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷೆತೆ ವಹಿಸಿ ಮಾತನಾಡಿ, ಸಣ್ಣ ಮನಸ್ಸಿನ ದೊಡ್ಡ ಜನರು ಉತ್ತಮ ಪರಿವರ್ತನೆಯ ಸಮಾಜ ಕಟ್ಟಲಾರರು. ದೊಡ್ಡ ಮನಸ್ಸಿನ ಸಣ್ಣ ಜನರಿಂದ ಮಾತ್ರ ಸಾಧ್ಯವೆಂದು ಡಾ.ಬಿ.ಆರ್.ಅಂಬೇಡ್ಕರ್ ಬಲವಾಗಿ ನಂಬಿದ್ದರು. ಸಣ್ಣ ಜನರಾದ ನಾವು ಸಮಾಜದ ದೌರ್ಜನ್ಯ ಮೌಢ್ಯದ ವಿರುದ್ಧ ಉತ್ತಮ ಸಮಾಜ ನಿರ್ಮಾಣವಾಗುವವರೆಗೂ ಹೋರಾಟ ಮುಂದುವರೆಸೋಣವೆಂದು ಎಂದು ಕರೆ ನೀಡಿ ಸಮ್ಮೇಳನದ ಗೋಷ್ಠಿಗಳಲ್ಲಿ ದಲಿತ ಮಹಿಳಾ ಸಾಹಿತ್ಯದ ಹಿನ್ನೋಟ ಹಾಗೂ ಮುನ್ನೋಟದ ವಿಚಾರವನ್ನು ಮಂಡಿಸಲಾಗುವುದು ಎಂದು ಕೇವಲ ಐದೇ ನಿಮಿಷದಲ್ಲಿ ಅಧ್ಯಕ್ಷೀಯ ಭಾಷಣವನ್ನು ಮೊಟುಕುಗೊಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಇಂದಿರಾ ಕೃಷ್ಣಪ್ಪ ಮಾತನಾಡಿ, ಸಿಂಧೂನದಿ ನಾಗರೀಕತೆಯಿಂದಲೂ  ಪಿತೃ ಹಾಗೂ ಬ್ರಾಹ್ಮಣಶಾಹಿ ವ್ಯವಸ್ಥೆಯಿಂದ ಮಹಿಳೆ ಎರಡನೇ ದರ್ಜೆಯಾಗಿದ್ದು, ಸಮಾನತೆ ಕಂಡಿಲ್ಲ. ಸ್ವತಂತ್ರ ಪೂರ್ವ ಹಾಗೂ ನಿಕಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಜ್ಯೋತಿ ಬಾಪುಲೆ, ಗಂಗೂಬಾಯಿ ಸಾಮಂತ ಮಹನೀಯರ ಕಾಲಘಟ್ಟದಲ್ಲಿ  ಮಹಿಳಾ ಹಕ್ಕೊತ್ತಾಯಕ್ಕೆಸಾಮಾಜಿಕ ಹೋರಾಟಗಳು  ನಡೆದವು,  ಸ್ವಾತಂತ್ರ್ಯ ಸಮಾನತೆಯನ್ನು ಪ್ರತಿಪಾಧಿಸಿ ದಲಿತರ ವಿರುದ್ಧದ ಶೋಷಣೆ, ದೌರ್ಜನ್ಯಗಳನ್ನು ಖಂಡಿಸಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಿಂದ ರಾಷ್ಟ್ರ ಸ್ವಾತಂತ್ರವಾದರೆ, ಬಾಬಾ ಸಾಹೇಬ್ ಅಂಬೇಸಡ್ಕರ್ ಸಮಾನತೆ, ಜಾತ್ಯಾತೀತ ಮನೋಭಾವವನ್ನು ಬಿತ್ತಿದರು. ಮಹಿಳೆಯರು ಕೇವಲ ಸಂತಾನೋತ್ಪತ್ತಿಗಾಗಿರುವುದು ಎನ್ನುವ ಧೋರಣೆಯಿದೆ. ದುಡಿಯುವ ಮಹಿಳೆಯು ಒಂದೇ ದಿನದಲ್ಲಿ ಎರಡು ದಿನಗಳ ಕೆಲಸವನ್ನು ನಿರ್ವಹಿಸುತ್ತಿದ್ದು ಅವಳ ಸೇವೆಗೆ ಲೆಕ್ಕವಿಲ್ಲ, ಗೌರವವಿಲ್ಲ. ರಾಷ್ಟ್ರೀಯ ವರಮಾನದಲ್ಲಿಯೂ ಪರಿಗಣಿಸಲಾಗಿಲ್ಲದಿರುವುದು ಶೋಚನೀಯ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ ಬೆಳಕಿನಲ್ಲಿ ದಲಿತ ಮಹಿಳಾ ಚಳುವಳಿಗಳ ಸಾಗಲಿ ಎಂದು ಆಶಿಸಿದರು.

ಸಮ್ಮೇಳನದ ಮುಖ್ಯ ಅತಿಥಿಯಾದ ನಾಡೋಜ ಪ್ರೊ.ಕಮಲಾ ಹಂಪನಾ ಮಾತನಾಡಿ, 1973ರಲ್ಲಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿಯೇ ಪ್ರತ್ಯೇಕ ಮಹಿಳಾ ಗೋಷ್ಠಿಯಿಂದ ಲಿಂಗ ತಾರತಮ್ಯ ಹೆಚ್ಚಲಿದ್ದು ವಿರೋಧ ವ್ಯಕ್ತಪಡಿಸಿದ್ದೇ ಇಂದಿಗೂ ಅದೇ ವಾಕ್ಯಕ್ಕೆ ಬದ್ಧಳಾಗಿರುವೆ. ದಲಿತ ಸಮಾಜದಲ್ಲಿ ಲಿಂಗತಾರತಮ್ಯವಿಲ್ಲ. ಸಮಾನತೆಗೆ ಉತ್ತಮ ಉದಾಹರಣೆ ದಲಿತ ಸಮಾಜ. ವೇದ ಪುರಾಣ, ಕೃತಿಗಳಿಗೆ ಜಾನಪದ ಸಾಹಿತ್ಯವೇ  ಮೂಲಬೇರು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಟಿವಿಗೆ, ಯುವ ಸಮೂಹವೂ ಮೊಬೈಲ್ ವ್ಯಾಮೋಹದಿಂದ ತಮ್ಮ ಶಕ್ತಿ ಸಾಮರ್ಥ್ಯವನ್ನೇ ಹಾಳುಗೆಡವಿಕೊಳ್ಳುತ್ತಿರುವುದು ದುಃಖಕರ. ಗಂಡು ಮಕ್ಕಳನ್ನು ತಿದ್ದಿ ಸಮಾಜ ತನ್ನಿಂದ ತಾನೆ ಸರಿ ಹೋಗುವುದು ಎಂದು ಗಂಭೀರ ವಿಷಯಕ್ಕೆ  ಹಾಸ್ಯ ದ ಲೇಪನ ನೀಡಿ ಭಾಷಣಕ್ಕೆ ವಿರಾಮ ನೀಡಿದರು.

ಪ್ರಾಸ್ತಾವಿಕವಾಗಿ ನುಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಭಾರತದಲ್ಲಿಯೇ ಪ್ರಪ್ರಥಮ ದಲಿತ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕದಲ್ಲಿ ಜರುಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಸಾಮಾನ್ಯ  ಸಾಹಿತ್ಯದಲ್ಲಿ ಮಹಿಳಾ ಪ್ರತಿನಿಧ್ಯ ಕಡಿಮೆ. ದಲಿತರ ಸಂಖ್ಯೆ ಅತಿ ವಿರಳ. ಆದ್ದರಿಂದ, ಕಳೆದ ಇಪ್ಪತ್ತು ವರ್ಷಗಳಿಂದ ಪುಸ್ತಕ ಪ್ರಾಧಿಕಾರದಿಂದ ಮಹಿಳೆಗೆ ಉತ್ತಮ ವೇದಿಕೆ ಒದಗಿಸಲಾಗುತ್ತಿದೆ. ಸಾಹಿತ್ಯ ಸಮ್ಮೇಳನದ ಜೊತೆಯಾಗಿಯೇ ಯುವ ಸಾಹಿತ್ಯ ಸಮ್ಮೇಳನದ ಜರುಗಿಸಲು ಚಿಂತನೆ ನಡೆದಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆತರಲಾಗಿದೆ ಎಂದು ತಿಳಿಸಿದರು.

ಸಮ್ಮೇಳನದ ವೇದಿಕೆಯ ಮೇಲೆ ಮೈಸೂರು ವಿವಿಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ.ಕೆ.ಎನ್.ಗಂಗಾನಾಯಕ್, ಪ್ರೊ.ನೀಲಗಿರಿ ಎಂ.ತಳವಾರ್, ಡಾ.ಎ.ಸಿ.ಲಲಿತಾ, ಡಾ.ಎಂ.ನಂಜಯ್ಯ ಹೊಂಗನೂರು ಉಪಸ್ಥಿತರಿದ್ದರು.  ನಿರ್ದೇಶಕಿ ಡಾ.ಪ್ರೀತಿ ಶ್ರೀಮಂಧರ್ ಕುಮಾರ್ ಸ್ವಾಗತಿಸಿದರು. ಶ್ರೀಅಮ್ಮ ರಾಮಚಂದ್ರ ಮತ್ತು ತಂಡದವರು ಕ್ರಾಂತಿಗೀತೆ ಹಾಗೂ ನಾಡಗೀತೆ ಹಾಡಿದರು. ಮಾನಸಗಂಗೋತ್ರಿಯ ಮುಖ್ಯ ದ್ವಾರದ ವಿಶ್ವಮಾನವ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಮ್ಮೇಳನಾಧ್ಯಕ್ಷರಿಗೆ ಮೈಸೂರು ಪೇಟ ತೊಡಿಸಿ ಸಾರೋಟ್ ನಲ್ಲಿ ವಿವಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಬಿ.ಟಿ.ಲಲಿತಾ ನಾಯ್ಕ್ ಸಮ್ಮೇಳನದ ದ್ವಜಾರೋಹಣ ನೆರವೇರಿಸಿ ಮಹಾ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಡೊಳ್ಳು, ಹಲಗೆ ವಾದ್ಯ ತಂಡಗಳು ಲಂಬಾಣಿ ನೃತ್ಯ, ಗೊರವರ ಕುಣಿತ, ಪೂಜಾ ಕುಣಿತ, ಬೊಂಬೆ ನೃತ್ಯದ ಕಲಾ ತಂಡಗಳು ಮೆರವಣಿಗೆಗೆ ಕಳೆ ಕಟ್ಟಿದವು.

Leave a Reply

comments

Related Articles

error: