ಸುದ್ದಿ ಸಂಕ್ಷಿಪ್ತ
ಅನಿರ್ದಿಷ್ಟಾವಧಿ ಧರಣಿ: ಸೆ.11 ಕ್ಕೆ
ಸೋಮವಾರಪೇಟೆ, ಸೆ.9: ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ವಿರೋಧಿಸಿ, ಮರು ಡಾಂಬರೀಕರಣಕ್ಕೆ ಒತ್ತಾಯಿಸಿ ಸೆ.11ರಂದು ಮಡಿಕೇರಿ ಪಿ.ಎಂ.ಜಿ.ಎಸ್.ವೈ ಯೋಜನಾ ವಿಭಾಗದ ಕಚೇರಿ ಎದುರು ಬೆಳಿಗ್ಗೆ 11 ಗಂಟೆಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಆರ್ಟಿಐ ಕಾರ್ಯಕರ್ತ ಬಿ.ಪಿ.ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಡವನಾಡು ಗ್ರಾಮದಿಂದ ಸಜ್ಜಳ್ಳಿ ಗಿರಿಜನರ ಹಾಡಿ ಮಾರ್ಗವಾಗಿ ಕಾಜೂರು ಸಂಪರ್ಕ ರಸ್ತೆ ಹಾಗು ನೇರುಗಳಲೆ ಹೊಸಳ್ಳಿ ರಸ್ತೆ ಕಾಮಗಾರಿ 2016 ಮೇ ತಿಂಗಳಲ್ಲಿ ನಡೆದಿದ್ದು, ಕೇವಲ ಮೂರು ತಿಂಗಳಲ್ಲಿ ರಸ್ತೆ ಹಾಳಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ.ನಷ್ಟವಾಗಿದೆ. ಇಂಜಿನಿಯರ್ ಹಾಗು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ಮರು ಡಾಂಬರೀಕರಣಕ್ಕೆ ಆದೇಶ ನೀಡಬೇಕು. ಮಂಗಳೂರು ಪಿ.ಎಂ.ಜಿ.ಎಸ್.ವೈ ಯೋಜನ ವಿಭಾಗದ ಕಾರ್ಯಪಾಲಕ ಅಭಿಯಂತರು ಪ್ರತಿಭಟನಾ ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡಬೇಕು. ತಪ್ಪಿದ್ದಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. (ವರದಿ: ಕೆಸಿಐ, ಎಲ್.ಜಿ)