ಕರ್ನಾಟಕಪ್ರಮುಖ ಸುದ್ದಿ

ಬಹುಪಯೋಗಿ ವಾಹನ ನಿಲುಗಡೆ ನಿರ್ಮಾಣ ಹಂತದ ಕಾಮಗಾರಿ ಬರುವ ಫೆಬ್ರವರಿ ತಿಂಗಳೊಳಗೆ ಪೂರ್ಣಗೊಳ್ಳಲಿದೆ : ಸಚಿವ ಕೆ.ಜೆ. ಜಾರ್ಜ್

ರಾಜ್ಯ(ಬೆಂಗಳೂರು) ಸೆ.11:- ನಗರದ ಸ್ವತಂತ್ರ ಉದ್ಯಾನವನದ ಸಮೀಪ ಬಿಬಿಎಂಪಿ ಕೈಗೆತ್ತಿಕೊಂಡಿರುವ ಮೂರು ಅಂತಸ್ತುಗಳ ಬಹುಪಯೋಗಿ ವಾಹನ ನಿಲುಗಡೆ ನಿರ್ಮಾಣ ಹಂತದ ಕಾಮಗಾರಿ ಬರುವ ಫೆಬ್ರವರಿ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಸುಮಾರು 70 ಕೋಟಿ ರೂ. ವೆಚ್ಚದಲ್ಲಿ 2015ರ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ ಕಲ್ಲುಬಂಡೆ ಮತ್ತು ಗ್ರಾನೈಟ್‌ಗಳು ಇದ್ದುದ್ದರಿಂದ ಕಾಮಗಾರಿ ವಿಳಂಬಗೊಂಡಿದೆ ಎಂದು ತಿಳಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮೇಯರ್ ಪದ್ಮಾವತಿ ಅವರೊಂದಿಗೆ ವಾಹನ ನಿಲುಗಡೆ ಕಾಮಗಾರಿಯನ್ನು ಪರಿಶೀಲಿಸಿದ ಸಚಿವ ಜಾರ್ಜ್ ಅವರು, ಕಾಮಗಾರಿ ವೇಳೆ ಗ್ರಾನೈಟ್ ಕಲ್ಲುಗಳು ಸಿಕ್ಕಿದ್ದರಿಂದ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಗೌರವಧನ ನೀಡುವಂತೆ ಮನವಿ ಮಾಡಿದ್ದರು. ನಂತರ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗ್ರಾನೈಟ್ ನ್ನು ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು. ಅಂದಾಜು 500 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಸ್ಥಳಾವಕಾಶವಿದೆ. ಈ ಪ್ರಮಾಣವನ್ನು ಇನ್ನೊಂದು ರ್ಯಾಂಪ್ ಅಳವಡಿಕೆ ಮಾಡುವ ಮೂಲಕ ಹೆಚ್ಚಳ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು. ನಗರದಲ್ಲಿ ದಾಖಲೆಯ ಮಳೆ ಬಂದು ರಸ್ತೆಗಳು ಹಾಳಾಗಿವೆ. ಇಷ್ಟೊಂದು ದೊಡ್ಡ ಮಳೆ ಬಂದ ಉದಾಹರಣೆ ಇಲ್ಲ. ಮಳೆಗಾಲ ಮುಗಿಯುತ್ತಿದ್ದಂತೆ, ನಗರದ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಇಂದಿರಾ ಕ್ಯಾಂಟೀನ್‌ನಲ್ಲಿ ಸಾಂಬಾರು ಹೆಚ್ಚಳ ಮಾಡಿ ಅನ್ನದ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ಅಂತಹ ಯಾವುದೇ ಆಲೋಚನೆ ಬಿಬಿಎಂಪಿ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ 5 ಸಾವಿರ ಕೋಟಿ ರೂ. ಗೂ ಹೆಚ್ಚು ಕಾಮಗಾರಿಗಳು ಆರಂಭಗೊಂಡಿವೆ. ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: