ಪ್ರಮುಖ ಸುದ್ದಿ

ಸುಪಾರಿ ಹಂತಕರಿಂದ ಗೌರಿ ಲಂಕೇಶ್ ಹತ್ಯೆ: ಆಂಧ್ರ ಮೂಲದ ಹಂತಕನ ಸೆರೆ?

ಪ್ರಮುಖ ಸುದ್ದಿ, ಬೆಂಗಳೂರು, ಸೆ.೧೧: ಗೌರಿ ಲಂಕೇಶ್ ಹತ್ಯೆಗೆ ಸುಪಾರಿ ನೀಡಲಾಗಿತ್ತೇ. ಸುಪಾರಿ ಪಡೆದ ಆಂಧ್ರಮೂಲದ ಹಂತಕ ಸಿಕ್ಕಿಬಿದ್ದಿದ್ದಾನೆಯೇ? ಆತನಿಂದ ಕೊಲೆ ರಹಸ್ಯ ಬಯಲಾಗುವುದೇ. ಹೌದು ಎನ್ನುತ್ತಿವೆ ಪೊಲೀಸ್ ಮೂಲಗಳು.
ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸುತ್ತಿದ್ದು, ಗೌರಿ ಹತ್ಯೆಗೆ ಸುಪಾರಿ ನೀಡಿದವರು ಯಾರು? ಏಕೆ ಎಂಬ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಗೌರಿ ಹತ್ಯೆ ನಂತರ ಗಾಂಧಿಬಜಾರ್‌ನಲ್ಲಿರುವ ಲಂಕೇಶ್ ಪತ್ರಿಕೆ ಕಚೇರಿಯಿಂದ ಗೌರಿ ಲಂಕೇಶ್ ಅವರ ನಿವಾಸದವರೆಗಿನ ಸಿಸಿ ಕ್ಯಾಮೆರಾ ಹಾಗೂ ಗೌರಿ ಅವರ ಮೊಬೈಲ್ ಸಂಭಾಷಣೆ ಮತ್ತು ಟವರ್ ಲೋಕೇಶನ್ ಆಧರಿಸಿ ನಡೆಸಿದ ತನಿಖೆ ವೇಳೆ ಆಗಂತುಕನ ಅಸ್ಪಷ್ಟ ಮಾಹಿತಿ ದೊರೆತಿದ್ದು, ಈ ಮಾಹಿತಿ ಆಧಾರದ ಮೇಲೆ ಆಂಧ್ರಕ್ಕೆ ತೆರಳಿದ್ದ ವಿಶೇಷ ಎಸ್‌ಐಟಿ ತಂಡ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದೆ ಎಂದು ಗೊತ್ತಾಗಿದೆ.
ಗೌರಿ ಹತ್ಯೆ ನಡೆದ ದಿನ ಶಂಕಿತ ವ್ಯಕ್ತಿಯ ಮೊಬೈಲ್ ಟವರ್ ಗಾಂಧಿಬಜಾರ್‌ನಲ್ಲಿ ಸ್ಥಿರವಾಗಿದ್ದು, ನಂತರ ಆರ್‌ಆರ್‌ನಗರದ ಗೌರಿ ನಿವಾಸದ ಬಳಿ ಆನ್ ಅಂಡ್ ಆಫ್ ಆಗಿತ್ತು. ಹತ್ಯೆ ನಡೆದ ಕೆಲ ನಿಮಿಷಗಳ ತರುವಾಯ ಶಂಕಿತ ವ್ಯಕ್ತಿಯ ಅದೇ ಮೊಬೈಲ್ ಟವರ್ ರಾಜರಾಜೇಶ್ವರಿ ನಗರದ ಶಾಲೆಯೊಂದರ ಬಳಿ ಮತ್ತೆ ಆನ್ ಅಂಡ್ ಆಫ್ ಆಗಿತ್ತು. ಈ ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಎಸ್‌ಐಟಿ ತಂಡಕ್ಕೆ ಅದೇ ಮೊಬೈಲ್ ಆಂಧ್ರದಲ್ಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ಎಸ್‌ಐಟಿ ತಂಡ ಶಂಕಿತನ ಹೆಡೆಮುರಿ ಕಟ್ಟಿ ಎಳೆದು ತಂದಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳದಲ್ಲಿ ಶಂಕಿತ ಆರೋಪಿಯನ್ನು ಎಸ್‌ಐಟಿ ತೀವ್ರ ವಿಚಾರಣೆಗೊಳಪಡಿಸಿದ್ದು, ಈತ ಗುಂಡು ಹಾರಿಸಿ ಪರಾರಿಯಾದ ಹಂತಕನೇ? ಹಂತಕನಿಗೆ ಸುಪಾರಿ ನೀಡಿದ್ದು ಯಾರು? ಗೌರಿ ಹತ್ಯೆಗೆ ನಿಖರ ಕಾರಣ ಏನೆಂಬುದು ಬಾಯಿ ಬಿಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. (ವರದಿ ಬಿ.ಎಂ)

Leave a Reply

comments

Related Articles

error: