ಕರ್ನಾಟಕ

ಆರ್ ಟಿ ಸಿ ಮಾಡಿಕೊಡಲು ಸತಾಯಿಸಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಸೋಮವಾರಪೇಟೆ, ಸೆ.11: ಆಸ್ತಿ ದಾಖಲೆ ಮಾಡಿಕೊಡಲು ತಾಲೂಕು ಕಚೇರಿಯ ಸಿಬ್ಬಂದಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಅಂಗವಿಕಲರೊಬ್ಬರು ಕುಟುಂಬ ಸಮೇತ ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿದರು.

ಶನಿವಾರಸಂತೆ ಸಮೀಪದ ಮೆಣಸ ಗ್ರಾಮದ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ಎಂ.ಡಿ.ದಾಳಿ, ಅವರ ಪತ್ನಿ ಕಾಳಮ್ಮ, ಮಕ್ಕಳಾದ ದೇವಮ್ಮ, ರಾಜಪ್ಪ, ಹರೀಶ್ ಧರಣಿ ನಡೆಸಿದವರು. ನಾನು ಪರಿಶಿಷ್ಟ ಜಾತಿಗೆ ಸೇರಿದ ಹಿನ್ನೆಲೆ 1979-80ನೇ ಸಾಲಿನಲ್ಲಿ ಸರ್ಕಾರ 5 ಎಕರೆ ಜಾಗವನ್ನು ಮಂಜೂರು ಮಾಡಿದ್ದು, ಜಾಗಕ್ಕೆ ಸಾಗುವಳಿ ಚೀಟಿಯನ್ನು ನೀಡಿದೆ. ನನ್ನ ಹೆಸರಿಗೆ ಎಂ.ಸಿ. ಹಾಗೂ ಜಮಾಬಂಧಿ ದಾಖಲಾಗಿರುತ್ತದೆ ಎಂದು ಎಂ.ಡಿ.ದಾಳಿ ಹೇಳಿದರು. ಆದರೆ ಇದುವರೆಗೆ ಆರ್‍ಟಿಸಿ ನೀಡಲು ಕಂದಾಯ ಇಲಾಖೆ ಮುಂದಾಗಿಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಶಾಸಕರಿಗೆ ತಮ್ಮ ನೋವು ತೋಡಿಕೊಂಡರು.

ಕಂದಾಯ ಇಲಾಖೆಯ ಕೆಲ ಪ್ರಮುಖರು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಆಸ್ತಿ ದಾಖಲಾತಿ ನೀಡಲು ಸಲ್ಲದ ಕಾರಣ ನೀಡಿ ಸತಾಯಿಸುತ್ತಿದ್ದಾರೆ ಎಂದು ದೂರಿದರು. ಸಂಬಂಧಪಟ್ಟವರು 50ಸಾವಿರ ನೀಡಿದರೆ, ನಿಮ್ಮ ಆಸ್ತಿ ದಾಖಲಾತಿ ಮನೆ ಬಾಗಿಲಿಗೆ ಬಂದು ತಲುಪುತ್ತದೆ ಎಂದು ಬ್ರೋಕರ್ ಒಬ್ಬರು ಹೇಳಿದ್ದಾರೆ. ನಾನು ಸ್ವಾತಂತ್ರ್ಯಹೋರಾಟಗಾರನಾಗಿದ್ದೇನೆ. ಕಾಯಿಲೆಯಿಂದ ನನ್ನ ಕಾಲು ಕತ್ತರಿಸಿದ್ದಾರೆ. ನನ್ನ ಮಗಳಿಗೆ ಎರಡು ಕಣ್ಣು ಕಾಣುವುದಿಲ್ಲ, ನಾವು ಎಲ್ಲಿಂದ ಹಣ ನೀಡುವುದು ಎಂದು ಶಾಸಕರೊಂದಿಗೆ ದಾಳಿಯವರು ತನ್ನ ಅಸಹಾಯಕತೆ ವ್ಯಕ್ತಪಡಿಸಿದರು. ನಾನು ಎಸಿ ಅವರೊಂದಿಗೆ ಚರ್ಚಿಸಿ, ಆಸ್ತಿ ದಾಖಲೆ ಕೊಡಿಲಿಸಲು ಶ್ರಮವಹಿಸುವುದಾಗಿ ಶಾಸಕರು ಭರವಸೆ ನೀಡಿದರು. ಮೆಣಸ ಗ್ರಾಮದ ಎಂ.ಡಿ.ದಾಳಿಯವರ ಒತ್ತುವರಿ ಜಾಗ ಖುಸ್ಕಿಯಾಗಿದ್ದ ಕಾರಣ, ಈ ಹಿಂದೆಯೆ ಕಂದಾಯ ಇಲಾಕೆ ಮಂಜೂರಾತಿಯನ್ನು ರದ್ದುಪಡಿಸಿದೆ. ಅದೇಶದ ಮರುಪರಿಶೀಲನೆಗೆ ಎಸಿ ನ್ಯಾಯಾಲಯದಲ್ಲಿ ದಾಳಿಯವರು ಅರ್ಜಿ ಸಲ್ಲಿಸಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ವರದಿ ಮಾಡುವಂತೆ ನ್ಯಾಯಾಲಯ ಅದೇಶ ನೀಡಿರುವ ಹಿನ್ನೆಲೆ ಈಗಾಗಲೆ ವರದಿ ಸಲ್ಲಿಸಿದ್ದೇನೆ. ಮುಂದೆ ನ್ಯಾಯಾಲಯ ತೀರ್ಪು ಪ್ರಕಟಸಲಿದೆ ಎಂದು ತಹಸೀಲ್ದಾರ್ ಮಹೇಶ್ ಹೇಳಿದರು.

ಎಸಿಯವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆಯ ಮೇರಗೆ ಧರಣಿ ಹಿಂಪಡೆಯಲಾಯಿತು. ಧರಣಿಯಲ್ಲಿ ದಲಿತಪರ ಸಂಘಟನೆಗಳ ಪ್ರಮುಖರಾದ ಜಯಪ್ಪ ಹಾನಗಲ್, ಡಿ.ಎಸ್.ನಿರ್ವಾಣಪ್ಪ, ಎಂ.ಪಿ.ಹೊನ್ನಪ್ಪ, ಕರವೇ, ಕರ್ನಾಟಕ ಭೂಹಕ್ಕುದಾರರ ವೇದಿಕೆ, ಕರ್ನಾಟಕ ರೈತಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: