ಪ್ರಮುಖ ಸುದ್ದಿ

ಹೊರರಾಜ್ಯಗಳಿಂದ ಬಂದು ಬೀಳುತ್ತಿದೆ ರಾಶಿ ರಾಶಿ ತ್ಯಾಜ್ಯ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಸೆ.೧೨: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಹೊರರಾಜ್ಯಗಳಿಂದ ತ್ಯಾಜ್ಯಗಳನ್ನು ತಂದು ತಾಲೂಕಿನ ನಿರ್ಜನ ಪ್ರದೇಶಗಳಲ್ಲಿ ಹರಡುತ್ತಿದ್ದ ಚಟುವಟಿಕೆಗಳು ಮತ್ತೆ ಪ್ರಾರಂಭವಾಗಿದ್ದು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ಕೇರಳದಿಂದ ಆಸ್ಪತ್ರೆ ಹಾಗೂ ಕ್ಲಿನಿಕಲ್ ತ್ಯಾಜ್ಯಗಳನ್ನು ಲಾರಿಗಳಲ್ಲಿ ತುಂಬಿಸಿ ತಂದು ಅರಣ್ಯ ಪ್ರದೇಶದಲ್ಲಿ ಹಾಗೂ ಪಟ್ಟಣದ ಸಮೀಪದ ನಿರ್ಜನ ಸ್ಥಳಗಳಲ್ಲಿ ಸುರಿಯಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಿದ ಪರಿಣಾಮ ಸ್ಥಗಿತಗೊಂಡಿತ್ತು. ಆದರೆ ಇತ್ತೀಚೆಗೆ ತಮಿಳುನಾಡಿನಿಂದ ತ್ಯಾಜ್ಯಗಳನ್ನು ಬಟ್ಟೆಯಲ್ಲಿ ಸುತ್ತಿ ತಂದು ಹಂಗಳ ಗ್ರಾಮದಿಂದ ಪಟ್ಟಣದವರೆಗಿನ ನಿರ್ಜನ ಪ್ರದೇಶಗಳಲ್ಲಿ ಬಿಸಾಡಲಾಗುತ್ತಿದೆ.
ಈ ಮಾರ್ಗದಲ್ಲಿ ಕೆಕ್ಕನಹಳ್ಳ ಹಾಗೂ ಮೇಲುಕಾಮನಹಳ್ಳಿ ಬಳಿ ಅರಣ್ಯ ತನಿಖಾಠಾಣೆಗಳಿವೆ. ಅಲ್ಲದೆ ಬಂಡೀಪುರದಲ್ಲಿ ಪೊಲೀಸ್ ಉಪಠಾಣೆಯಿದೆ. ಆದರೂ ಇಲ್ಲಿ ಯಾವುದೇ ವಾಹನಗಳನ್ನು ತಪಾಸಣೆ ಮಾಡದ ಪರಿಣಾಮವಾಗಿ ಹೊರರಾಜ್ಯದ ತ್ಯಾಜ್ಯಗಳು ಬರುತ್ತಿದ್ದು ಇದು ಹೀಗೆಯೇ ಮುಂದುವರೆದರೆ ತಾಲೂಕು ಹೊರರಾಜ್ಯಗಳ ಕಸದಬುಟ್ಟಿಯಾಗಲಿದೆ. ಆದ್ದರಿಂದ ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ಚೆಕ್ ಪೋಸ್ಟ್‌ಗಳಲ್ಲಿ ಬಿಗಿಯಾದ ತಪಾಸಣೆ ಮಾಡುವ ಮೂಲಕ ತ್ಯಾಜ್ಯಗಳ ಸಾಗಾಣೆ ತಡೆಗಟ್ಟಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: