ಪ್ರಮುಖ ಸುದ್ದಿಮೈಸೂರು

ಹೆಜ್ಜೆಯೊಂದಿಗೆ ಮೊಳಗುತ್ತಿದೆ ಗೆಜ್ಜೆಯ ದನಿ : ಯುವ ಸಂಭ್ರಮಕ್ಕೆ ನಡೆದಿದೆ ಕ್ಷಣಗಣನೆ

ಮೈಸೂರು, ಸೆ.12:- ಅಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಯುವ ಸಮೂಹವೇ ಕಣ್ಣಿಗೆ ಕಾಣಿಸುತ್ತಿತ್ತು. ಅವರ ಮೊಗದಲ್ಲಿ ಮೆಲುವಾದ ಮಂದಹಾಸಗಳಿತ್ತು, ಕಂಗಳಲ್ಲಿ ಹೊಳಪಿತ್ತು. ತಾವು ಈ ಬಾರಿ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕಾಲೇಜು ಕೀರ್ತಿ ಪತಾಕೆಯನ್ನು ಹಾರಿಸಲೇಬೇಕೆಂಬ ಛಲವಿತ್ತು, ರೆಡಿ ವನ್ ಟು..ಎಂಬ ತಾಲೀಮಿನಲ್ಲಿ ಹೆಜ್ಜೆಯೊಂದಿಗೆ ಗೆಜ್ಜೆಯ ದನಿ ಮೊಳಗಿತ್ತು.  ಇವೆಲ್ಲ ಕಂಡು ಬಂದಿದ್ದು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಗರಿಗೆದರಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಯುವ ಸಂಭ್ರಮಕ್ಕೆ ಭವ್ಯ ವೇದಿಕೆಯಲ್ಲಿ ಚಾಲನೆ ದೊರೆಯಲಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಾಲೇಜು ಕನ್ಯೆಯರು, ಯುವಕರು ಮಂಗಳವಾರ ಬೆಳಿಗ್ಗಿನಿಂದಲೇ ಮಾನಸ ಗಂಗೋತ್ರಿಯ ಬಯಲು ರಂಗಮಂದಿರಕ್ಕೆ ಆಗಮಿಸಿ ತಾವು ಪ್ರದರ್ಶಿಸುವ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ತುಂಬಾ ಉತ್ಸಾಹದಿಂದ ತರಬೇತಿ ನೀಡುವ ಗುರುಗಳ ಆದೇಶವನ್ನು ಪಾಲಿಸಿದರೆ, ಇನ್ಕೆಲವರು ಪ್ರಯಾಣದಿಂದ ಆಯಾಸವಾದಂತೆ ಕಂಡು ಬರುತ್ತಿದ್ದರು.

ನೃತ್ಯಪ್ರದರ್ಶನ ನೀಡಲು ಆಗಮಿಸಿದ ನೃತ್ಯಪಟು ರಕ್ಷಿತಾ ಮಾತನಾಡಿ ನಾವು ಇದೇ ಮೊದಲ ಬಾರಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನವರಾತ್ರಿ ಸಮಯವಾಗಿರುವುದರಿಂದ ಮೈಸೂರಿಗೆ ಸಂಬಂಧಿಸಿದಂತೆ ನವರಾತ್ರಿ ಸಂಭ್ರಮ ನೃತ್ಯವನ್ನು ಪ್ರದರ್ಶಿಸುತ್ತಿದ್ದೇವೆ. ತುಂಬಾನೇ ಖುಷಿ ಆಗುತ್ತಿದೆ. ನಾವು ಈ ಯುವ ಸಂಭ್ರಮದಲ್ಲಿ ಪಾಲ್ಗೊಂಡು ನಮ್ಮ ಕಾಲೇಜಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಬೇಕೆನ್ನುವ ಮಹದಾಸೆಯನ್ನು ಹೊಂದಿದ್ದೇವೆ ಎಂದರು.

ಯುವಸಮೂಹವೇ ಅಲ್ಲಿ ಕಂಡು ಬಂದಿದ್ದು, ನಮ್ಮ ನಾಡು,ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: